ರಾಯಚೂರು: ರಾಯಚೂರು ಬೃಹತ್ ಶಾಖೋತ್ಪನ್ನ ವಿದ್ಯುತ್ ಕೇಂದ್ರಕ್ಕೆ (ಆರ್‌ಟಿಪಿಎಸ್ ) ಕಲ್ಲಿದ್ದಲು ಸಾಗಿಸುತ್ತಿದ್ದ ರೈಲು ಹಳಿ ತಪ್ಪಿರುವ ಘಟನೆ ರಾಯಚೂರಿನ ಶಕ್ತಿನಗರದಲ್ಲಿ ನಡೆದಿದೆ. ರೈಲು ನಿಧಾನವಾಗಿ ಚಲಿಸುತ್ತಿದ್ದ ಕಾರಣ ಯಾವುದೇ ಅನಾಹುತ ಸಂಭವಿಸಲಿಲ್ಲ.
ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರಕ್ಕೆ ಪ್ರತಿನಿತ್ಯ ಐದಾರು ರೇಕ್‌ಗಳ ಕಲ್ಲಿದ್ದಲು ಸಾಗಿಸಲಾಗುತ್ತದೆ. ಮಂಗಳವಾರ ಮಹಾನದಿ ಕೋಲ್ಡ್ ಫೀಲ್ಡ್‌ನಿಂದ ವಿದ್ಯುತ್ ಕೇಂದ್ರಕ್ಕೆ ಕಲ್ಲಿದ್ದಲು ಸಾಗಿಸುತ್ತಿದ್ದ ರೈಲು ಹಳಿ ತಪ್ಪಿದೆ. ಹೀಗೆ ಹಳಿ ತಪ್ಪಿದ ರೈಲು ಮಾರ್ಗ ಮಧ್ಯದಲ್ಲಿಯೇ ನಿಂತಿದ್ದು ಕಲ್ಲಿದ್ದಲು ತುಂಬಿದ ರೈಲಿನ ರೇಕ್ ಗಳು ನೆಲಕ್ಕೆ ಕುಸಿದಿದೆ.
ಘಟನೆ ಬಳಿಕ ವ್ಯಾಗನ್‌ಗಳಿಂದ ಕಾರ್ಮಿಕರ ಮೂಲಕ ಕಲ್ಲಿದ್ದಲು ಸಾಗಿಸಲಾಗಿದೆ.ಹಳಿ ಜಖಂಗೊಂಡಿದ್ದು ದುರಸ್ತಿಗಾಗಿ ಎರಡು ದಿನಗಳು ತಗುಲಲಿದೆ.ಎಂದು ಆರ್‌ಟಿಪಿಎಸ್ ಅಧಿಕಾರಿಗಳು ಹೇಳಿದ್ದಾರೆ.
ವಿದ್ಯುತ್ ಕೇಂದ್ರದಲ್ಲಿ ಯಾವುದೇ ಅಪಾಯವಾಗಿಲ್ಲ ಸಧ್ಯ ಕೇಂದ್ರದಲ್ಲಿ ಕಲ್ಲಿದ್ದಲು ಸಂಗ್ರಹವಿರುವ ಕಾರಣ ವಿದ್ಯುತ್ ಉತ್ಪಾದನೆಗೆ ತೊಡಕಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.
ಒಟ್ಟು 1720 ಮೆಗಾ ವ್ಯಾಟ್ ಸಾಮಥ್ರ್ಯದ ವಿದ್ಯುತ್ ಕೇಂದ್ರದಲ್ಲಿ ಪ್ರಸ್ತುತ 402 ಮೆಗಾ ವ್ಯಾಟ್ ವಿದ್ಯುತ್ ಮಾತ್ರವೇ ಉತ್ಪಾದನೆ ಮಾಡಲಾಗುತ್ತಿದೆ. ಒಟ್ಟು ಎಂಟು ಘಟಕಗಳಲ್ಲಿ ಎರಡು ಘಟಕಗಳು ಮಾತ್ರ ಕಾರ್ಯಾಚರಿಸುತ್ತಿದ್ದು ಇನ್ನೂ ಆರು ಘಟಕಗಳು ತಾಂತ್ರಿಕ ದೋಷ ಹಾಗೂ ಬೇಡಿಕೆ ಕೊರತೆ ಕಾರಣ ಸ್ಥಗಿತವಾಗಿದೆ.