ಪೊಲೀಸ್-ಜನರ ನಡುವಿನ ಅಂತರ ದೂರಾಗಿಸಲು ಬರುತ್ತಿದ್ದಾರೆ 'ನಿಮ್ಮ ಮಿತ್ರ': ಬೀಟ್ ಪೊಲೀಸರಿಂದ ಜನರಿಗೆ 'ವಿಸಿಟಿಂಗ್ ಕಾರ್ಡ್' ವಿತರಣೆ
ಮೈಸೂರು: ಪೊಲೀಸರು ಹಾಗೂ ಜನರ ನಡುವಿನ ಅಂತರವನ್ನು ದೂರಾಗಿಸುವ ಸಲುವಾಗಿ ಪೊಲೀಸ್ ಇಲಾಖೆ ಹೊಸ ಹೆಜ್ಜೆಯೊಂದನ್ನು ಇಟ್ಟಿದ್ದು, ಜನರ ಮನೆಗಳ ಬಾಗಿಲಿಗೆ ತೆರಳುವ ಬೀಟ್ ಪೊಲೀಸರು ನಾನು ನಿಮ್ಮ ಮಿತ್ರ ಎಂದು ಹೇಳಿ ವಿಸಿಟಿಂಗ್ ಕಾರ್ಡ್'ಗಳನ್ನು ವಿತರಿಸುತ್ತಿದ್ದಾರೆ.
ನಾನು ನಿಮ್ಮ ಪ್ರದೇಶದ ಬೀಟ್ ಪೊಲೀಸ್ ಅಧಿಕಾರಿಯಾಗಿದ್ದು, ನಿಮ್ಮ ಸಮಸ್ಯೆ, ದೂರು ಹಾಗೂ ಸಲಹೆಗಳಿಗಾಗಿ ನನ್ನನ್ನು ಸಂಪರ್ಕಿಸಿ ಎಂದು ಮನೆ ಬಳಿಗೆ ತೆರಳಿ ಪೊಲೀಸರು ವಿಸಿಟಿಂಗ್ ಕಾರ್ಡ್ ಗಳನ್ನು ನೀಡುತ್ತಿದ್ದಾರೆ.
ಮೈಸೂರು ನಗರದ ಬೀಟ್ ಪೊಲೀಸರು ತಮ್ಮ ವ್ಯಾಪ್ತ್ರಿಯಲ್ಲಿ ಬರುವ ಮನೆಗಳಿಗೆ ತೆರಳಿ, ತಮ್ಮ ಅಧಿಕೃತ ವಿಸಿಟಿಂಗ್ ಕಾರ್ಡ್ ಗಳನ್ನು ನೀಡಿ ಜನರೊಂದಿಗಿನ ಅಂತರವನ್ನು ದೂರಾಗಿಸುವ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.
ಜನಸ್ನೇಹಿ ಪೊಲೀಸ್ ವ್ಯವಸ್ಥೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡುವ ಉದ್ದೇಶದಿಂದ ಪ್ರತಿಯೊಂದು ಪ್ರದೇಶಕ್ಕೆ ಒಬ್ಬ ಪೊಲೀಸ್ ಎಂಬ ಧ್ಯೇಯದಡಿ ಹಾಗೂ ಪೊಲೀಸ್ ಸಿಬ್ಬಂದಿಗಳ ಸಮಾನ ಕರ್ತವ್ಯ ಮತ್ತು ಸಮಾನ ಗೌರವ ನೀಡುವ ಸಂಬಂಧ ನೂತನ ಜನ ಸ್ನೇಹಿ ಪೊಲೀಸ್ ಗಸ್ತು ವ್ಯವಸ್ಥೆಯನ್ನು 2017ರ ಏಪ್ರಿಲ್ 1 ರಿಂದ ಜಾರಿಗೆ ತರಲಾಗಿದೆ. ಈ ಹಿನ್ನಲೆಯಲ್ಲಿ ಮೈಸೂರು ನಗರದ ಕಮಿಷನರೇಟ್ ವ್ಯಾಪ್ತಿಯನ್ನು ಠಾಣಾವಾರು ಇರುವ ಸಿಬ್ಬಂದಿಗೆ ತಕ್ಕಂತೆ ವಿಭಜಿಸಲಾಗಿದೆ. ಪ್ರತೀಯೊಂದು ಬೀಟ್'ಗೂ ಓರ್ವ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ವಿಸಿಟಿಂಗ್ ಕಾರ್ಡ್'ನಲ್ಲಿ ಬೀಟ್ ಪೊಲೀಸರ ಹೆಸರು, ಹುದ್ದೆ, ಭಾವಚಿತ್ರ, ಮೊಬೈಲ್ ನಂಬರ್, ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ, ಬೀಟ್ ಸಂಖ್ಯೆ, ಇನ್ಸ್ ಪೆಕ್ಟರ್ ಮೊಬೈಲ್ ನಂಬರ್, ಮೈಸೂರು ನಗರ ಪೊಲೀಸ್ ಇಮೇಲ್ ವಿಳಾಸ ಮತ್ತು ವಾಟ್ಸ್'ಅಪ್ ನಂಬರ್'ನ್ನು ನಮೂದಿಸಲಾಗಿರುತ್ತದೆ. ಎಲ್ಲಾ ವಿವರಗಳನ್ನು ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಮುದ್ರಿಸಲಾಗಿರುತ್ತದೆ.
ಯಾವುದೇ ರೀತಿಯ ದೂರುಗಳು, ಸಮಸ್ಯೆಗಳು ಹಾಗೂ ಸಲಹೆಗಳಿದ್ದರೂ ಜನರು ತಮ್ಮ ಪ್ರದೇಶದ ಬೀಟ್ ಪೊಲೀಸರನ್ನು ಸಂಪರ್ಕಿಸಿ ತಿಳಿಸಬಹುದಾಗಿದೆ.