ರಾಜ್ಯ

ದೇವರ ಹೆಸರಿನಲ್ಲಿ ಸರ್ಕಾರಿ ಭೂಮಿಯನ್ನು ಕಬಳಿಸಬೇಡಿ: ಹೈಕೋರ್ಟ್

Manjula VN
ಬೆಂಗಳೂರು: ಸರ್ಕಾರಿ ಭೂಮಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದ ಕುರಿತಂತೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ದೇವರ ಹೆಸರಿನಲ್ಲಿ ಸರ್ಕಾರಿ ಭೂಮಿಯನ್ನು ಕಬಳಿಸಬಾರದು ಎಂದು ಶನಿವಾರ ಹೇಳಿದೆ. 
ಬೆಂಗಳೂರು ಗ್ರಾಮಾಂತರ ಜಿಲ್ಲೆ ಆನೇಕಲ್ ತಾಲೂಕಿನ ಹುಲಿಮಂಗಲ ಗ್ರಾಮದಲ್ಲಿ ಶ್ರೀ ಸದ್ಗುರು ಸಾಯಿಬಾಬಾ ಚಾರಿಟೇಬಲ್ ಟ್ರಸ್ಟ್ ಭೂಮಿಯ ಮಾಲೀಕತ್ವ ಕುರಿತಂತೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿತ್ತು. ಟ್ರಸ್ಟ್ ಅಧ್ಯಕ್ಷ ಎಂ. ರಾಜಪ್ಪ ಎಂಬುವವರಿಗೆ ಸೇರಿದ್ದಾಗಿದೆ. ಹುಲಿಮಂಗಲ ಗ್ರಾಮ ಪಂಚಾಯಿತಿಗೆ ಸೇರಿದ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದ ಟ್ರಸ್ಟ್, ಬಳಿಕ ಆ ಪ್ರದೇಶದಲ್ಲಿ ದೇಗುಲವನ್ನು ನಿರ್ಮಾಣ ಮಾಡಿ ಭೂಮಿಯ ಮಾಲೀಕತ್ವ ಕುರಿತು ನ್ಯಾಯಾಲಯದ ಮೆಟ್ಟಿಲೇರಿದೆ. 
ಟ್ರಸ್ಟ್ ಸಲ್ಲಿಸಿದ್ದ ಆರ್ಜಿಯನ್ನು ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಅರ್ಜಿಯನ್ನು ನಿರಾಕರಿಸಿದ್ದು, ಅರ್ಜಿಯನ್ನು ಹಿಂಪಡೆಯುವಂತೆ ತಿಳಿಸಿದ್ದಾರೆ. ಅಲ್ಲದೆ, ಸರ್ಕಾರಿ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯತ್ ಅವರ ಕಾರ್ಯಚಟುವಟಿಕೆಗಳು ತಮ್ಮ ಜವಾಬ್ದಾರಿಗಳನ್ನು ಸರಿಯಾಗಿ ನಿಭಾಯಿಸುತ್ತಿಲ್ಲ ಎಂಬುದು ಸ್ಪಷ್ಟವಾಗಿ ತೋರಿಸುತ್ತಿದೆ ಎಂದು ಹೇಳಿದ್ದಾರೆ. 
ಪ್ರಕರಣ ಸಂಬಂಧ ಇಂದು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿರುವ ಅರ್ಜಿದಾರರಂತೆಯೇ ಅದೆಷ್ಟು ಸರ್ಕಾರಿ ಭೂಮಿ ದುರ್ಬಳಕೆಯಾಗಿದೆ. ಅದೂ ಕೂಡ ದೇವರ ಹೆಸರಿನಲ್ಲಿ... ದೇವರ ಹೆಸರಿನಲ್ಲಿ ಭೂಮಿ ಕಬಳಿಸುವುದು ಸಂಪೂರ್ಣವಾಗಿ ನಿಲ್ಲಬೇಕು... ಒಬ್ಬ ವ್ಯಕ್ತಿಯ ಲಾಭಕ್ಕಾಗಿ ಸರ್ಕಾರಿ ಭೂಮಿಯನ್ನು ಕಬಳಿಸಿಕೊಂಡು ದೇವರ ಹೆಸರನ್ನು ತರಬಾರದು ಎಂದು ತಿಳಿಸಿದ್ದಾರೆ. 
SCROLL FOR NEXT