ಕೇಂದ್ರ ವಿಭಾಗದ ಡಿಸಿಪಿ ಚಂದ್ರಗುಪ್ತ
ಬೆಂಗಳೂರು; ಗೂಂಡಾಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಕಾಂಗ್ರೆಸ್ ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ತಪ್ಪೊಪ್ಪಿಕೊಂಡಿದ್ದಾನೆಂದು ಕೇಂದ್ರ ವಿಭಾಗದ ಡಿಸಿಪಿ ಚಂದ್ರಗುಪ್ತ ಅವರು ಮಂಗಳವಾರ ಹೇಳಿದ್ದಾರೆ.
ಪ್ರಕರಣ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಡಿಸಿಪಿ ಚಂದ್ರಗುಪ್ತ ಅವರು, ಪ್ರಕರಣದ ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದ್ದು, ಈ ವರೆಗೂ 7 ಆರೋಪಿಗಳನ್ನು ಬಂಧನಕ್ಕೊಳಪಡಿಸಿ ವಿಚಾರಣೆ ನಡೆಸಲಾಗುತ್ತಿದೆ. ಇನ್ನೂ ಕೆಲವು ಆರೋಪಿಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
ವಿದ್ವತ್'ಗೆ ಮೊದಲು ಹೊಡೆದವರು ಯಾರು ಎಂಬುದು ಸ್ಪಷ್ಟವಾಗಿಲ್ಲ. ಪ್ರಸ್ತುತ ವಿದ್ವತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಹೇಳಿಕೆ ನೀಡಿರುವ ಸ್ಥಿತಿಯಲ್ಲಿಲ್ಲ. ಪ್ರಕರಣ ಸಂಬಂಧ ತನಿಖೆ ಮುಂದುವರೆದಿದ್ದು, ಪ್ರಕರಣ ತನಿಖೆ ಯಾವುದೇ ಕಾರಣಕ್ಕೂ ದಾರಿ ತಪ್ಪಲು ಬಿಡುವುದಿಲ್ಲ. ನಿಷ್ಪಷ್ಟಪಾತವಾಗಿ ತನಿಖೆ ಮಾಡುತ್ತೇವೆಂದು ತಿಳಿಸಿದ್ದಾರೆ.
ವಿದ್ವತ್ ಹಾಗೂ ಆರೋಪಿಗಳ ನಡುವೆ ಮಾತಿನ ಚಕಮಕಿ ನಡೆದಿದ್ದು, ವಿದ್ವತ್ ಮೇಲೆ ಹಲ್ಲೆ ನಡೆಸಿರುವುದನ್ನು ಆರೋಪಿಗಳು ಒಪ್ಪಿಕೊಂಡಿದ್ದಾರೆ. ಹ್ಯಾರಿಸ್ ಮತ್ತು ವಿದ್ವತ್ ನಡುವೆ ಈ ಹಿಂದೆ ಎಂದಿಗೂ ಗಲಾಟೆಗಳಾಗಿಲ್ಲ. ಆಸ್ಪತ್ರೆಗೆ ದಾಖಲಾಗಿರುವ ಸಂದರ್ಭದಲ್ಲಿಯೂ ವಿದ್ವತ್'ಗೆ ಬೆದರಿಕೆಗಳನ್ನು ಹಾಕಲಾಗಿದೆ. ಪ್ರಕರಣ ಸಂಬಂಧ ಪ್ರತ್ಯಕ್ಷದರ್ಶಿಗಳನ್ನು ವಿಚಾರಣೆಗೊಳಪಡಿಸಲಾಗುತ್ತಿದೆ. ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.