ರಾಜ್ಯ

ಡಿವೈಎಸ್‌ಪಿ ಎಂ.ಕೆ. ಗಣಪತಿ ಆತ್ಮಹತ್ಯೆ ಪ್ರಕರಣ: ಗೃಹ ಸಚಿವರಿಗೆ ವರದಿ ಸಲ್ಲಿಕೆ

Nagaraja AB

ಬೆಂಗಳೂರು: ಡಿವೈಎಸ್‌ಪಿ ಎಂ.ಕೆ. ಗಣಪತಿ  ಆತ್ಮಹತ್ಯೆ ಪ್ರಕರಣದ ವಿಚಾರಣೆ ನಡೆಸಲು ರಚಿಸಿದ್ದ ನ್ಯಾ.ಕೆ.ಎನ್. ಕೇಶವನಾರಾಯಣ ಅವರ ನೇತೃತ್ವದ ಆಯೋಗ ಗೃಹ ಸಚಿವ ರಾಮಲಿಂಗಾರೆಡ್ಡಿ ಅವರಿಗೆ  ಇಂದು ವರದಿ ಸಲ್ಲಿಸಿದೆ.

320 ಪುಟಗಳ ವರದಿಯಲ್ಲಿ 48 ಸಾಕ್ಷಿಗಳು ಹಾಗೂ ಇಬ್ಬರು ತನಿಖಾಧಿಕಾರಿಗಳ ವಿಚಾರಣೆ ನಡೆಸಿರುವ ಮಾಹಿತಿ ಒಳಗೊಂಡಿದೆ.

2016ರ ಜುಲೈ 7ರಂದು ಮಂಗಳೂರು ಡಿವೈಎಸ್‌ಪಿ ಎಂ.ಕೆ.ಗಣಪತಿ ಮಡಿಕೇರಿಯ ವಸತಿ ಗೃಹದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಸಚಿವ ಜಾರ್ಜ್‌, ಐಪಿಎಸ್‌ ಅಧಿಕಾರಿಗಳಾದ ಪ್ರಣವ್ ಮೊಹಂತಿ, ಎ.ಎಂ. ಪ್ರಸಾದ್‌ ನನ್ನ ಸಾವಿಗೆ ಕಾರಣ ಎಂದು ಗಣಪತಿ ಸಾವಿಗೆ ಮುನ್ನ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು.

ಸೋಮವಾರಪೇಟೆ ತಾಲ್ಲೂಕಿನ ರಂಗಸಮುದ್ರದ ಗಣಪತಿ ಮಂಗಳೂರು ಐಜಿ ಕಚೇರಿಗೆ ವರ್ಗವಾಗಿದ್ದರು. ಅವರ ಮೊಬೈಲ್‌, ಕಂಪ್ಯೂಟರ್‌ನಲ್ಲಿದ್ದ ದಾಖಲೆಗಳನ್ನು ನಾಶ ಮಾಡಿರುವುದು ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯಿಂದ ಬಹಿರಂಗವಾಗಿತ್ತು.

ಪ್ರಕರಣದ ತನಿಖೆ ನಡೆಸಿದ್ದ ಸಿಐಡಿ ಸಚಿವ ಜಾರ್ಜ್‌ ಹಾಗೂ ಹಿರಿಯ ಐಪಿಎಸ್‌ ಅಧಿಕಾರಿಗಳಿಗೆ ಕ್ಲೀನ್‌ ಚಿಟ್‌ ನೀಡಿತ್ತು.

SCROLL FOR NEXT