ಬೆಂಗಳೂರು: ಮಾ.2 ರಿಂದ 15ರ ವರೆಗೆ ಬೆಂಗಳೂರು ರಕ್ಷಿಸಿ ಪಾದಯಾತ್ರೆ ನಡೆಸಲು ಬಿಜೆಪಿ ಉದ್ದೇಶಿಸಿದೆ. ನಗರದ ಒಟ್ಟು 28 ವಿಧಾನಸಭಾ ಕ್ಷೇತ್ರಗಳಲ್ಲಿ 2 ಸಾವಿರ ಜನರೊಂದಿಗೆ ಪಾದಯಾತ್ರೆ ನಡೆಸಿ ಜನಜಾಗೃತಿ ಮೂಡಿಸುವುದಾಗಿ ತಿಳಿಸಿದೆ.
ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕರಾದ ಆರ್.ಅಶೊಕ್, ಅರವಿಂದ ಲಿಂಬಾವಳಿ, ಸಂಸದ ಪಿ.ಸಿ.ಮೋಹನ್ ನಗರದಲ್ಲಿ ಕುಸಿಯುತ್ತಿರುವ ಕಾನೂನು ಸುವ್ಯವಸ್ಥೆ, ಕಳಪೆ ಮೂಲಭೂತ ಸೌಕರ್ಯ, ಶಾಸಕ ಎನ್.ಎ.ಹ್ಯಾರಿಸ್ ಪುತ್ರ ಮಹಮ್ಮದ್ ನಲಪಾಡ್ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳನ್ನು ಮುಂದಿಟ್ಟುಕೊಂಡು ಪಾದಯಾತ್ರೆ ನಡೆಸಲಾಗುವುದು ಎಂದು ತಿಳಿಸಿದರು. ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಮೇಲೆ ಬೆಂಗಳೂರಿನಲ್ಲಿ ಅಪರಾಧ ಪ್ರಮಾಣ ಹೆಚ್ಚಾಗಿದೆ ಎಂದು ದೂರಿದ್ದಾರೆ.
ಆರ್.ಅಶೋಕ್ ಮಾತನಾಡಿ, ಮಾ.2ರಿಂದ ಆರಂಭವಾಗುವ ಪಾದಯಾತ್ರೆಯಲ್ಲಿ ಕೇಂದ್ರ ಸಚಿವರಾದ ಅನಂತ್‍ಕುಮಾರ್, ಡಿ.ವಿ.ಸದಾನಂದಗೌಡ, ರಾಜ್ಯ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವೇಡ್ಕರ್, ರಾಜ್ಯ ಉಸ್ತುವಾರಿ ಕೆ.ಮುರಳೀಧರರಾವ್ ಸೇರಿದಂತೆ ಪಕ್ಷದ ಹಲವು ನಾಯಕರು ಭಾಗವಹಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಪ್ರಮುಖವಾಗಿ 28 ವಿಧಾನಸಭಾ ಕ್ಷೇತ್ರಗಳಲ್ಲಿ 10 ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಪಾದಯಾತ್ರೆ ಮಾಡಲಾಗುವುದು. ಬೆಂಗಳೂರು ರಕ್ಷಿಸಿ ಪಾದಯಾತ್ರೆಯಲ್ಲಿ ಮುಖ್ಯವಾಗಿ ಇತ್ತೀಚೆಗೆ ನಗರವನ್ನೇ ತಲ್ಲಣಗೊಳಿಸಿದ ಶಾಂತಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಮಹಮದ್ ನಲಪಾಡ್ ಹಾಗೂ ಅವರ ಸ್ನೇಹಿತರು ವಿದ್ವತ್ ಮೇಲೆ ನಡೆಸಿದ ಗೂಂಡಾಗಿರಿ ಪ್ರಕರಣ ಮುಖ್ಯ ವಿಷಯವಾಗಲಿದೆ ಎಂದರು. ಇದಲ್ಲದೆ, ಬಿಬಿಎಂಪಿ ಕಚೇರಿಗೆ ನುಗ್ಗಿ ತಮ್ಮ ಕೆಲಸವನ್ನು ಮಾಡಿಕೊಡಲಿಲ್ಲ ಎಂದು ಅಧಿಕಾರಿ ಮೇಲೆ ಕಾಂಗ್ರೆಸ್ ಮುಖಂಡ ಕೆ.ನಾರಾಯಣಸ್ವಾಮಿಯ ಗೂಂಡಾಗಿರಿ, ರುದ್ರೇಶ್, ಸಂತೋಷ್, ಖದಿರೇಶ್ ಪ್ರಕರಣಗಳ ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಬೇಕೆಂದು ಒತ್ತಾಯಿಸುವುದಾಗಿ ತಿಳಿಸಿದರು.
ಕುಸಿಯುತ್ತಿರುವ ಕಾನೂನು ಸುವ್ಯವಸ್ಥೆ, ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ, ಸರ ಅಪಹರಣ ಸೇರಿದಂತೆ ಮತ್ತಿತರ ವಿಷಯಗಳನ್ನು ಮುಂದಿಟ್ಟುಕೊಂಡು ಪಾದಯಾತ್ರೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.