ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಮತದಾರರ ಪಟ್ಟಿ ಪರಿಷ್ಕರಣೆ ಅವಧಿಯನ್ನು ವಿಸ್ತರಿಸಿದ್ದು, ಜನವರಿ 12ರವರೆಗೆ ವಿಶೇಷ ಪರಿಷ್ಕರಣೆಗೆ ಅವಕಾಶ ನೀಡಲಾಗಿದೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರು, ಜನವರಿ 12ರ ವರೆಗೆ ಬಿಬಿಎಂಪಿ ವ್ಯಾಪ್ತಿಯ ಎಲ್ಲ 28 ವಿಧಾನಸಭಾ ಕ್ಷೇತ್ರಗಳಲ್ಲಿ ಹೆಸರು ನೊಂದಾಯಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಜನವರಿ 1 ರವರೆಗೆ ಸಿಲಿಕಾನ್ ಸಿಟಿಯಲ್ಲಿ ಒಟ್ಟು 85,92,815 ಮತದಾರರ ನೊಂದಣಿಯಾಗಿದ್ದು, ಹೊಸದಾಗಿ 95 ಸಾವಿರ ಮಂದಿ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸಿದ್ದಾರೆ. ಅಲ್ಲದೆ 25483 ಮಂದಿ ಹೆಸರು ಡಿಲೀಟ್ ಮಾಡಿಸಿದ್ದಾರೆ. 15206 ಜನರು ಹೆಸರು ಬದಲಾವಣೆ ಮಾಡಿಸಿದ್ದಾರೆ ಎಂದು ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.
ಫೆಬ್ರವರಿ 20ರಂದು ಅಂತಿಮ ಮತದಾರರ ಪಟ್ಟಿ ಬಿಡುಗಡೆ ಮಾಡಲಾಗುವುದು. ವೋಟರ್ ಐಡಿ ಇದ್ದರೂ ಮತದಾರರ ಪಟ್ಟಿಯಲ್ಲಿ ಹೆಸರಿದ್ದವರಿಗೆ ಮಾತ್ರ ಮತದಾನಕ್ಕೆ ಅವಕಾಶ ನೀಡಲಾಗುವುದು ಎಂದು ಬಿಬಿಎಂಪಿ ಆಯುಕ್ತರು ಸ್ಪಷ್ಟಪಡಿಸಿದ್ದಾರೆ.