ಬೆಂಗಳೂರು: ಫೆಬ್ರವರಿಯಿಂದ ಪ್ರತಿ ತಿಂಗಳ ಎರಡನೇ ಭಾನುವಾರ ಬೆಂಗಳೂರಿನಲ್ಲಿ 'ವಾಹನ ವಿರಳ ಸಂಚಾರ ದಿನ' ವಾಗಿ(ಲೇಸ್ ಟ್ರಾಫಿಕ್ ಡೇ) ಆಚರಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು ಕನ್ನಡದ ಖ್ಯಾತ ನಟರಾದ ಪುನೀತ್ ರಾಜಕುಮಾರ್ ಮತ್ತು ರಾಕಿಂಗ್ ಸ್ಟಾರ್ ಯಶ್ ಈ ಬಗ್ಗೆ ಪ್ರಚಾರ ನಡೆಸಲಿದ್ದಾರೆ.
ನಗರದ ಪರಿಸರ ರಕ್ಷಣೆ ಮತ್ತು ಸಾರ್ವಜನಿಕ ಸಾರಿಗೆ ಉತ್ತೇಜಿಸುವುದಕ್ಕಾಗಿ ಪ್ರತಿ ತಿಂಗಳು ಎರಡನೇ ಭಾನುವಾರದಂದು ವಾಹನ ವಿರಳ ಸಂಚಾರ ದಿನವನ್ನು ಆಚರಿಸಲು ಸಾರಿಗೆ ಸಚಿವಾಲಯ ತೀರ್ಮಾನಿಸಿದೆ. ಅಂತೆ ಇದನ್ನು ಹೆಚ್ಚು ಜನಪ್ರಿಯಗೊಳಿಸುವ ಸಲುವಾಗಿ ಪುನೀತ್ ರಾಜಕುಮಾರ್ ಮತ್ತು ಯಶ್ ರನ್ನು ಬಳಸಿಕೊಳ್ಳಲು ಸಚಿವಾಲಯ ಆಯ್ಕೆ ಮಾಡಿದ್ದು ಟಿಪಿಕಪ್ ಹಾಡುಗಳ ಮೂಲಕ ಗಮನ ಸೆಳೆದಿರುವ ಯೋಗರಾಜ್ ಭಟ್ ಈ ಕುರಿತು ಜಾಗೃತಗೊಳಿಸುವ ಹಾಡೊಂದನ್ನು ಬರೆಯಲಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾರಿಕೆ, ಬೆಂಗಳೂರು ಮೆಟ್ರೋ ರೈಲು ನಿಗಮ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಸೇರಿ ಸಭೆ ನಡೆಸಿ ಆಚರಣೆಯ ಸಮಾರಂಭದ ಉದ್ಘಾಟನಾ ದಿನಾಂಕವನ್ನು ಶೀಘ್ರದಲ್ಲೇ ಅಂತಿಮಗೊಳಿಸಲಾಗುವುದು. ನಂತರ ಫೆಬ್ರವರಿಯಿಂದ ಈ ಆಚರಣೆ ಜಾರಿಗೆ ಬರಲಿದೆ ಎಂದು ಸಾರಿಗೆ ಸಚಿವ ಎಚ್ಎಂ ರೇವಣ್ಣ ಹೇಳಿದ್ದಾರೆ.
ಸಾರಿಗೆ ಸಚಿವಾಲಯದ ಈ ಆಚರಣೆಗೆ ಸ್ಥಳೀಯ ನಿವಾಸಿ ಕಲ್ಯಾಣ ಸಂಘಗಳು ಬೆಂಬಲ ಸೂಚಿಸಿವೆ. ನಗರದ ಐಟಿ-ಬಿಟಿ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಟೆಕ್ಕಿಗಳು ಸಹ ವಾಹನ ವಿರಳ ಸಂಚಾರ ದಿನ ಆಚರಣೆಯಲ್ಲಿ ಪಾಲ್ಗೋಳ್ಳಲಿದ್ದಾರೆ. ಇನ್ನು ಇದಕ್ಕಾಗಿ 75ಕ್ಕೂ ಹೆಚ್ಚು ವೋಲ್ವಾ ಬಸ್ ಗಳು ಬಿಎಂಟಿಸಿಗೆ ಸೇರ್ಪಡೆಗೊಂಡಿವೆ ಎಂದು ರೇವಣ್ಣ ಹೇಳಿದ್ದಾರೆ.