ಬೆಂಗಳೂರು: ಕಳಸಾ ಬಂಡೂರಿ ನಾಲಾ ಯೋಜನೆ, ಮಹದಾಯಿ ನದಿ ನೀರಿಗಾಗಿ ಆಗ್ರಹಿಸಿ ನಡೆಸುತ್ತಿರುವ ಕರ್ನಾಟಕ ಬಂದ್ ಗೆ ಉತ್ತರ ಕರ್ನಾಟರದಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ.
ಪ್ರಮುಖವಾಗಿ ಉತ್ತರ ಕರ್ನಾಟಕದ ನರಗುಂದ, ಹಾವೇರಿ, ಯಾದಗಿರಿಯಲ್ಲಿ ಬಂದ್ ಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದ್ದು, ಯಾವುದೇ ರೀತಿಯ ವಾಹನಗಳು ರಸ್ತೆಗಳಿಯದೇ ಕರ್ನಾಟಕ ಬಂದ್ ಗೆ ಬೆಂಬಲ ವ್ಯಕ್ತಪಡಿಸಿವೆ. ಯಾದಗಿರಿ, ಹೊಸಪೇಟೆಯಲ್ಲಿ ಪ್ರತಿಭಟನಾಕಾರರು ರೈಲು ತಡೆದು ಪ್ರತಿಭಟನೆ ನಡೆಸಿದ್ದು, ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಕನ್ನಡ ಸಂಘಟನೆಗಳು ಗುರುವಾರ ಬೆಳಿಗ್ಗೆ ಇಲ್ಲಿನ ರೈಲು ನಿಲ್ದಾಣದಲ್ಲಿ ಉದ್ಯಾನ ಎಕ್ಸ್‌ಪ್ರೆಸ್ ರೈಲುಗಾಡಿಯನ್ನು ತಡೆದು ಪ್ರತಿಭಟನೆ ನಡೆಸಿದರು.
ಅಂತೆಯೇ ಕಳಸಾ-ಬಂಡೂರಿ ಹೋರಾಟದ ಕೇಂದ್ರ ಸ್ಥಾನವಾಗಿರುವ ಗದಗಿನ ನರಗುಂದದಲ್ಲೂ ಪ್ರತಿಭಟನೆ ಬಿಸಿ ಹೆಚ್ಚಾಗಿದ್ದು, ಮುಂಜಾನೆಯೇ ಪ್ರತಿಭಟನಾಕಾರರು ವಿಜಯಪುರ-ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಾವಣಗೆರೆಯಲ್ಲೂ ಬೆಳಗ್ಗೆ ಬೀದಿಗಿಳಿದಿರುವ ಸಂಘಟನೆಗಳು ಮಹದಾಯಿ ವಿವಾದ ಇತ್ಯರ್ಥ ಪಡಿಸುವಂತೆ ಒತ್ತಾಯಿಸಿದ್ದಾರೆ. ರೈತ ಸಂಘಟನೆ ಹಾಗೂ ಕನ್ನಡ ಪರ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಗುತ್ತಿದೆ. ಜಯದೇವ ಸರ್ಕಲ್ ಬಳಿ ಟಯರ್ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಅಂತೆಯೇ ಹುಬ್ಬಳ್ಳಿಯಲ್ಲೂ ಕರವೇ ಕಾರ್ಯಕರ್ತರು ರೈಲು ತಡೆಯಲು ಪ್ರಯತ್ನಿಸಿದ್ದು, ನಗರ ಕೇಂದ್ರ ರೈಲು ನಿಲ್ದಾಣಕ್ಕೆ ಮುತ್ತಿಗೆ ಹಾಕಿದ್ದ ಪ್ರತಿಭಟನಾಕಾರರನ್ನು ಆರ್‌ಪಿಎಫ್ ಪೊಲೀಸರು ತಡೆದು ಹೊರ ಕಳುಹಿಸಿದರು. ಅಲ್ಲದೆ ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಅಣುಕು ಶವಯಾತ್ರೆಯನ್ನೂ ಕೂಡ ನಡೆಸಿದರು. ಮುಂಜಾಗ್ರತಾ ಕ್ರಮವಾಗಿ ರೈಲು ನಿಲ್ದಾಣಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದಾರೆ. ಧಾರವಾಡದಲ್ಲಿ ಬೆಳ್ಳಂಬೆಳಗ್ಗೆಯೇ ಬೀದಿಗಿಳಿದಿರುವ ಕರ್ನಾಟಕ ನವ ನಿರ್ಮಾಣ ಸೇನೆ ರಸ್ತೆ ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ. ಜಿಲ್ಲಾಧ್ಯಕ್ಷ ಗಿರೀಶ್ ಪೂಜಾರ ನೇತೃತ್ವದಲ್ಲಿ ಧಾರವಾಡ- ಗೋವಾ ರಾಷ್ಟ್ರೀಯಾ ಮುಖ್ಯರಸ್ತೆ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆಳ್ನಾವರ ಟೋಲ್ ಬಳಿ ರಸ್ತೆ ಬಂದ್ ಮಾಡಿ ಗೋವಾಗೆ ತೆರಳುವ ವಾಹನಗಳಿಗೆ ಕಾರ್ಯಕರ್ತರು ತಡೆ ಹಾಕುತ್ತಿದ್ದಾರೆ.
ಬೆಳಗಾವಿಯಲ್ಲೂ ಪ್ರತಿಭಟನಾಕಾರರು ಗೋವಾಗೆ ತೆರಳುವ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ. ಕಳಸಾ ಬಂಡೂರಿ ಯೋಜನೆಯ ನಿರ್ಲಕ್ಷ್ಯ ಖಂಡಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನಾಕಾರರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಪ್ರತಿಭಟನಾನಿರತ ಐವರನ್ನು ಬೆಳಗಾವಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಳ್ಳಾರಿಯಲ್ಲಿ ಜನ್ಮಭೂಮಿ ರಕ್ಷಣಾ ಪಡೆಯಿಂದ ಪ್ರತಿಭಟನೆ ಆರಂಭವಾಗಿದೆ. ನಗರದ ರಾಯಲ್ ವೃತ್ತದಲ್ಲಿ ಟೈರ್ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದು, ಗೋವಾ ಸಿಎಂ ಮನೋಹರ್ ಪರಿಕ್ಕರ್ ಹಾಗೂ ಗೋವಾ ನೀರಾವರಿ ಸಚಿವ ವಿನೋದ್ ಪಾಲ್ಯೇಕರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.