ರಾಜ್ಯ

ಮೈಸೂರು: ಅಭಯಾರಣ್ಯ ವ್ಯಾಪ್ತಿಯಲ್ಲಿ 2 ಹುಲಿ, 1 ಆನೆ ಅನುಮಾನಾಸ್ಪದ ಸಾವು

Raghavendra Adiga
ಮೈಸೂರು: ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ವಲಯದ ಜಿಎಸ್ ಬೆಟ್ಟ ವ್ಯಾಪ್ತಿಯಲ್ಲಿ ಎರಡು ಹುಲಿಗಳು ಹಾಗೂ ಒಂದು ಆನೆ ನಿಗೂಢವಾಗಿ ಸಾವನ್ನಪ್ಪಿವೆ.
ಎರಡು ಹುಲಿಗಳಲ್ಲಿ ಒಂದು ಗಂಡು ಇನ್ನೊಂದು ಹೆಣ್ಣು ಹುಲಿಗಳಾಗಿದ್ದು  ಕೊಳದ ಸಮೀಪದಲ್ಲಿ ಇವುಗಳ ಮೃತದೇಹ ದೊರಕಿದೆ. ಇಲ್ಲಿಂದ ಕೆಲವು ಮೀಟರ್ ಗಳಷ್ಟು ದೂರದಲ್ಲಿ ಹೆಣ್ಣು ಆನೆಯೊಂದರ ದೇಹವು ಪತ್ತೆಯಾಗಿದೆ. ಎರಡೂ ಹುಲಿಗಳು ಎರಡು ಮತ್ತು ಮೂರು ವರ್ಷಗಳ ನಡುವಿನ ವಯಸ್ಸಿನವಾಗಿದ್ದು ನಾಲ್ಕು ದಿನಗಳ ಹಿಂದೆ ಮರಣ ಹೊಂದಿರಬಹುದು ಎಂದು ಅರಣ್ಯ ಇಲಾಕಾ ಅಧಿಕಾರಿಗಳು ಹೇಳಿದ್ದಾರೆ.
"ಈ ಪ್ರಾಣಿಗಳ ದೇಹಗಳನ್ನು ನಾವು ಕಂಡಾಗ ಅವು ಕೊಳೆತಿರುವ ಸ್ಥಿತಿಯಲ್ಲಿದ್ದವು. ಕೆಲವು ಕಾಡು ಪ್ರಾಣಿಗಳು ಹುಲಿಗಳ ದೇಹದಿಂದ ಮಾಂಸವನ್ನು ತಿಂದಿದ್ದವು ಮತ್ತು ಆನೆಯ ಮಾಂಸವನ್ನು ಕೂಡಾ ಕಾಡು ಪ್ರಾಣಿಗಳು ತಿಂದಿದ್ದವು ಸತ್ತ ಆನೆಯ ಯಕೃತ್ತು ದೇಹದಿಂದ ಹೊರಬಂದಿತ್ತು. " ಪ್ರಾಣಿಗಳ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ್ದ ಪಶುವೈದ್ಯ ಡಾ. ನಾಗರಾಜ್ ಹೇಳಿದ್ದಾರೆ.
"ಹುಲಿಗಳು ಪರಸ್ಪರ ಹೋರಾಟ ನಡೆಸಿದ್ದಕ್ಕಾಗಿ ಮೃತವಾಗಿರುವುದೆ ಅಥವಾ ಅಲ್ಲವೆ ಎನ್ನುವ ಕುರಿತು ನಮಗೆ ಗೊಂದಲವಿದೆ. ಹುಲಿಗಳು ಮತ್ತು ಆನೆಗಳ ಸಾವಿಗೆ ವಿಷಕಾರಿ ವಸ್ತುಗಳು ಕಾರಣವಾಗಿರಬಹುದು ಈ ಹಂತದಲ್ಲಿ ಕಾಡು ಪ್ರಾಣಿಗಳು ಹೇಗೆ ವಿಷಕಾರಿ ಪದಾರ್ಥಗಳನ್ನು ತಿಂದಿವೆ ಎಂದು ನಮಗೆ ಹೇಲಲಾಗುವುದಿಲ್ಲ." ಹಿರಿಯ ಅಧಿಕಾರಿಗಳೊಬ್ಬರು ಹೇಳಿದ್ದಾರೆ.
ಈ ಕುರಿತಂತೆ ಮಾತನಾಡಿದ ವೈದ್ಯ ನಾಗರಾಜ್ ಪ್ರಾಣಿಗಳ ದೇಹದ ಭಾಗಗಳನ್ನು, ಅವುಗಳ ದೇಹದಲ್ಲಿ ಸಿಕ್ಕ ಪದಾರ್ಥಗಳನ್ನು ಬೆಂಗಳೂರು ಹಾಗೂ ಮೈಸೂರಿನ ಪ್ರಯೋಗಾಲಯಕ್ಕೆ ಕಳಿಸಲಾಗಿದೆ. ಅಲ್ಲಿಂದ ವರದಿ ಬಂದ ಬಳಿಕ ನಾವು ಈ ಪ್ರಾಣಿಗಳ ಸಾವಿನ ಬಗೆಗೆ ನಿಖರ ಕಾರಣ ತಿಳಿಯಬಹುದು ಎಂದರು.
SCROLL FOR NEXT