ರಾಮನಗರ: ಪ್ರವಾಸಕ್ಕೆಂದು ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಮೇಕೆದಾಟಿಗೆ ಆಗಮಿಸಿದ್ದ ಇಬ್ಬರು ಟೆಕ್ಕಿಗಳು ಸೆಲ್ಫಿ ತೆಗೆದುಕೊಳ್ಳುವ ಭರದಲ್ಲಿ ನೀರುಪಾಲಾದ ಘಟನೆ ಭಾನುವಾರ ನಡೆದಿದೆ.
ನೀರಿನಲ್ಲಿ ಕೊಚ್ಚಿ ಹೋದ ಯುವಕರು ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಸಾಫ್ಟ್ ವೇರ್ ಉದ್ಯೋಗಿಗಳಾಗಿದ್ದ ಸಮೀರ್ ರೆಹಮಾನ್(29) ಮತ್ತು ಭವಾನಿ ಶಂಕರ್(29) ಎಂದು ಗುರುತಿಸಲಾಗಿದೆ.
ನೀರುಪಾಲಾದ ಇಬ್ಬರೂ ಯುವಕರು ಮೂಲತಃ ಬೀದರ್ ನವರಾಗಿದ್ದು, ಉದ್ಯೋಗ ನಿಮಿತ್ತ ಬೆಂಗಳೂರಿನಲ್ಲಿ ನೆಲೆಸಿದ್ದರು.
ನಿನ್ನೆ ಇಬ್ಬರೂ ಕಾವೇರಿ ನೀರು ಹರಿಯುವ ಮೇಕೆದಾಟುಗೆ ತೆರಳಿದ್ದರು. ಮೊದಲಿಗೆ ಸಮೀರ್ ರೆಹಮಾನ್ ಸೆಲ್ಫಿ ತಗೆದುಕೊಳ್ಳುವ ವೇಳೆ ಜಾರಿ ನದಿಗೆ ಬಿದ್ದಿದ್ದಾನೆ. ಆತನನ್ನ ರಕ್ಷಿಸಲು ಹೋದ ಭವಾನಿ ಶಂಕರ್ ಕೂಡ ನೀರುಪಾಲಾಗಿದ್ದಾನೆ. ಇಬ್ಬರಿಗಾಗಿ ಅಗ್ನಿಶಾಮಕ ಸಿಬ್ಬಂದಿಯಿಂದ ಶೋಧ ಕಾರ್ಯ ನಡೆಯುತ್ತಿದೆ. ಆದರೆ ನದಿ ರಭಸವಾಗಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಕಾರ್ಯಾಚರಣೆಗೆ ಅಡ್ಡಿಯಾಗಿದೆ.
ಭಾನುವಾರ ಸಂಜೆಯ ನಂತರ ಕಾರ್ಯಾಚರಣೆ ಸ್ಥಗಿತಗೊಂಡಿತ್ತು. ಇಂದು ಬೆಳಗ್ಗೆ ಪುನಃ ಕಾರ್ಯಾಚರಣೆ ಆರಂಭಿಸಲಾಗಿದೆ.