ಬೆಂಗಳೂರು: ರೈಲಿನಲ್ಲಿ ಟಿಕೆಟ್ ಇಲ್ಲದೇ ಪ್ರಯಾಣ ಬೆಳೆಸುವ ಪ್ರಯಾಣಿಕರ ವಿರುದ್ಧ ಬೆಂಗಳೂರು ರೈಲ್ವೇ ವಿಭಾಗದ ವಾಣಿಜ್ಯ ಇಲಾಖೆಯ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಒಂದೇ ದಿನದಲ್ಲಿ ಬರೋಬ್ಬರಿ 1,600 ಪ್ರಯಾಣಿಕರ ವಿರುದ್ಧ ಪ್ರಕರಣ ದಾಖಲಿಸಿದೆ.
ಎರಡು ರೈಲ್ವೇ ನಿಲ್ದಾಣಗಳಲ್ಲಿ ಅಧಿಕಾರಿಗಳು ಒಂದು ದಿನ ಸುದೀರ್ಘ ಕಾರ್ಯಾಚರಣೆ ನಡೆಸಿದ್ದು, ಟಿಕೆಟ್ ಇಲ್ಲದೆ ಪ್ರಯಾಣ ಬೆಳೆಸುತ್ತಿದ್ದ 1,604 ಪ್ರಯಾಣಿಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ರೂ.5,60,870 ದಂಡದ ಹಣವನ್ನು ಸಂಗ್ರಹಿಸಿದೆ ಎಂದು ತಿಳಿಸಿದೆ.
ಬೆಂಗಳೂರು ವಿಭಾಗೀಯ ಹಿರಿಯ ವಾಣಿಜ್ಯ ವ್ಯವಸ್ಥಾಪಕ ಎನ್.ಆರ್. ಶ್ರೀಧರ್ ಮೂರ್ತಿಯವರು ಮಾತನಾಡ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮತ್ತು ಯಶವಂತಪುರ ರೈಲ್ವೇ ನಿಲ್ದಾಣಗಳಲ್ಲಿ ಬೆಳಿಗ್ಗೆ 3 ಗಂಟೆಯಿಂದ ರಾತ್ರಿ 11.45ರ ವರೆಗೂ ಕಾರ್ಯಾಚರಣೆ ನಡೆಸಲಾಗಿತ್ತು. ವಾಣಿಜ್ಯ ಇಲಾಖೆ ಸಿಬ್ಬಂದಿ ಹಾಗೂ ಎಲ್ಲಾ ರೈಲ್ವೇ ವಿಭಾಗದ ಸಿಬ್ಬಂದಿಗಳು ಜಂಟಿಯಾಗಿ ಶನಿವಾರ ಬೆಳಿಗ್ಗೆಯಿಂದ ರಾತ್ರಿಯವರೆಗೂ ಕಾರ್ಯಾಚರಣೆ ನಡೆಸಿತ್ತು ಎಂದು ಹೇಳಿದ್ದಾರೆ.
ಕಾರ್ಯಾಚರಣೆ ವೇಳೆ ಕೇವಲ ಒಂದೇ ದಿನದಲ್ಲಿ 1,600 ಪ್ರಯಾಣಿಕರ ವಿರುದ್ಧ ಪ್ರಕರಣ ದಾಖಲಿಸಿ ರೂ.5 ಲಕ್ಷ ದಂಡದ ಹಣವನ್ನು ಸಂಗ್ರಹಿಸಲಾಗಿದೆ. ಆರ್ಥಿಕ ವರ್ಷದಲ್ಲಿ ರೈಲ್ವೇ ಇಲಾಖೆ 1,31,794 ಪ್ರಯಾಣಿಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ರೂ.7.01 ಕೋಟಿ ದಂಡವನ್ನು ಸಂಗ್ರಹಿಸಿದೆ ಎಂದು ತಿಳಿಸಿದ್ದಾರೆ.
2014-2015ರಲ್ಲಿ 2,44,322 ಪ್ರಯಾಣಿಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ರೂ.10.47 ಕೋಟಿ ಸಂಗ್ರಹಿಸಲಾಗಿತ್ತು, 2015-2016ರಲ್ಲಿ 2,91,076 ಪ್ರಯಾಣಿಕರ ವಿರುದ್ಧ ಪ್ರಕರಣ, ರೂ.12.76 ಕೋಟಿ ಸಂಗ್ರಹ, 2016-2017ರಲ್ಲಿ 4,00,342 ಪ್ರಯಾಣಿಕರ ವಿರುದ್ಧ ಪ್ರಕರಣ, ರೂ. 19.02 ಕೋಟಿ ಸಂಗ್ರಹ, 2017-2018ರಲ್ಲಿ 4,86,465 ಪ್ರಯಾಣಿಕರ ವಿರುದ್ಧ ಪ್ರಕರಣ ರೂ.24.01 ಕೋಟಿ ಸಂಗ್ರಹ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.