ರಾಜ್ಯ

ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರ: ರಾಜ್ಯ ಸರ್ಕಾರದ ಪ್ರಸ್ತಾವನೆ ವಾಪಸ್‌ ಸಾಧ್ಯತೆ

Srinivasamurthy VN
ನವದೆಹಲಿ: ಲಿಂಗಾಯತ ಸಮುದಾಯಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ನೀಡಬೇಕೆಂದು ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಈ ಹಿಂದೆ ಕಳಿಸಿದ್ದ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ವಾಪಸು ಕಳುಹಿಸುವ ಸಾಧ್ಯತೆ ಇದೆ.
ರಾಜ್ಯಾದ್ಯಂತ ವ್ಯಾಪಕ ವಿವಾದಕ್ಕೆ ಕಾರಣವಾಗಿದ್ದ ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರಕ್ಕೆ ಸಂಬಂಧಿಸಿದ ರಾಜ್ಯ ಸರ್ಕಾರದ ಶಿಫಾರಸ್ಸನ್ನು ಕೇಂದ್ರ ಸರ್ಕಾರ ವಾಪಸ್ ಕಳುಹಿಸುವ ಸಾಧ್ಯತೆ ಇದೆ ಎನ್ವಲಾಗಿದೆ. ರಾಜ್ಯದಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದಿರುವ ಕಾರಣ ಪ್ರಸ್ತಾವನೆಯನ್ನು ಕೇಂದ್ರ ಗೃಹ ಸಚಿವಾಲಯ ವಾಪಸು ಕಳಿಸಿ ವಿಷಯವನ್ನು ಮರುಪರಿಗಣಿಸಿ ಹೊಸ ಪ್ರಸ್ತಾವನೆ ಕಳಿಸುವಂತೆ ಸೂಚಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಸಿದ್ದರಾಮಯ್ಯ ನೇತೃತ್ವದ ಈ ಹಿಂದಿನ ಕಾಂಗ್ರೆಸ್ ಸರ್ಕಾರ ವಿಧಾನಸಭೆ ಚುನಾವಣೆಗಳಿಗೆ ಮುನ್ನ ಕಳುಹಿಸಿದ್ದ ಈ ಪ್ರಸ್ತಾವನೆಯನ್ನು ಕೇಂದ್ರ ಗೃಹ ಸಚಿವಾಲಯ ಅಧ್ಯಯನ ಮಾಡಿ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯಕ್ಕೆ ರವಾನಿಸಿತ್ತು. ರಾಜ್ಯಮಟ್ಟದಲ್ಲಿ ಈ ವಿಷಯ ಕುರಿತು ಮರುಪರಿಗಣಿಸುವ ಅಗತ್ಯವಿರುವ ಕಾರಣ ಪ್ರಸ್ತಾವನೆಯನ್ನು ವಾಪಸ್ ಕಳುಹಿಸುವಂತೆ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ, ಗೃಹ ಸಚಿವಾಲಯಕ್ಕೆ ಸಲಹೆ ನೀಡಿತ್ತು.
ಲಿಂಗಾಯತರಿಗೆ ಪ್ರತ್ಯೇಕ ಧರ್ಮ ಮಾನ್ಯತೆ ನೀಡುವುದರಿಂದ ಮಹಾರಾಷ್ಟ್ರದಲ್ಲಿ ಬಹುತೇಕ ಲಿಂಗಾಯತ ಸಮುದಾಯದ ಕೆಲ ಉಪಜಾತಿಗಳಿಗೆ ನೀಡಲಾಗಿರುವ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸ್ಥಾನಮಾನ ವಾಪಸ್ ಪಡೆಯಬೇಕಾಗಿ ಬರುತ್ತದೆ. ಈ ಅಂಶಗಳನ್ನು ಪರಿಗಣಿಸಿ ರಾಜ್ಯ ಸರ್ಕಾರ ತನ್ನ ಈ ಪ್ರಸ್ತಾವನೆಯನ್ನು ಮರುಪರಿಗಣಿಸಿ ಹೊಸದಾಗಿ ಕಳಿಸುವ ಅಗತ್ಯವಿದೆ ಎಂದು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ
ಅಭಿಪ್ರಾಯಪಟ್ಟಿದೆ. ಇದೇ ಕಾರಣಕ್ಕೆ ರಾಜ್ಯ ಸರ್ಕಾರದ ಪ್ರತ್ಯೇಕ ಧರ್ಮ ಪ್ರಸ್ತಾವ ವಾಪಸ್ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಇತ್ತೀಚೆಗಷ್ಟೇ ಲಿಂಗಾಯತ ಮತ್ತು ವೀರಶೈವ ಮಹಾಸಭದ ಅಧ್ಯಕ್ಷ ಶ್ಯಾಮನೂರು ಶಿವಶಂಕರಪ್ಪ ಅವರು, ಕೇಂದ್ರ ಸರ್ಕಾರದ ಪ್ರತ್ಯೇಕ ಧರ್ಮದ ಕಡತವನ್ನು ವಾಪಸ್ ಕಳುಹಿಸುವುದಾದರೆ ಸ್ವಾಗತಿಸುತ್ತೇನೆ ಎಂದು ಹೇಳಿದ್ದರು. ಅಂತೆಯೇ ಪ್ರತ್ಯೇಕ ಧರ್ಮ ವಿಚಾರ ಹೋರಾಟದಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದ ನಿವೃತ್ತ ಐಎಎಸ್ ಅಧಿಕಾರಿ ಎಸ್ ಎಂ ಜಮಾದರ್ ಅವರ ವಿರುದ್ಧ ಹರಿಹಾಯ್ದರು. ಜಮಾದರ್ ಅವರು ತಾವು ಐಎಎಸ್ ಅಧಿಕಾರಿಯಾಗಿದ್ದಾಗ ಸಮುದಾಯಕ್ಕೆ ಏನೂ ಮಾಡಿಲ್ಲ ಎಂದು ಕಿಡಿಕಾರಿದರು.
SCROLL FOR NEXT