ರಾಜ್ಯ

ಗೌರಿ ಲಂಕೇಶ್ ಹತ್ಯೆ ಆರೋಪಿಗಳ ಹಿಟ್ ಲಿಸ್ಟ್ ನಲ್ಲಿ ಗಿರೀಶ್ ಕಾರ್ನಾಡ್: ಎಸ್ ಐಟಿ

Lingaraj Badiger
ಬೆಂಗಳೂರು: ಹಿರಿಯ ಪತ್ರಕರ್ತೆ ಹಾಗೂ ಸಾಮಾಜಿಕ ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಶಂಕಿತ ಆರೋಪಿಗಳು ಖ್ಯಾತ ಸಾಹಿತಿ ಗಿರೀಶ್ ಕಾರ್ನಾಡ್ ಮತ್ತು ಹಲವು ಸಾಹಿತಿಗಳು ಹಾಗೂ ಪ್ರಗತಿಪರರ ಕೊಲೆಗೆ ಸ್ಕೆಚ್​​ ರೆಡಿ ಮಾಡಿದ್ದರು ಎಂದು ಬುಧವಾರ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ ಐಟಿ ಅಧಿಕಾರಿಗಳು ಹೇಳಿದ್ದಾರೆ.
ಜ್ಞಾನಪೀಠ ಪ್ರಶಸ್ತಿ ವಿಜೇತ ಗಿರೀಶ್ ಕಾರ್ನಾಡ್, ಸಾಹಿತಿ ಹಾಗೂ ರಾಜಕಾರಣಿ ಬಿಟಿ ಲಲಿತಾ ನಾಯಕ್, ನಿಡುಮಾಮಿಡಿ ಮಠದ ವೀರಭದ್ರ ಚೆನ್ನಮಲ್ಲ ಸ್ವಾಮೀಜಿ, ಪ್ರಗತಿಪರ ಚಿಂತಕ ಸಿಎಸ್ ದ್ವಾರಕನಾಥ್ ಅವರು ಹಿಟ್ ಲಿಸ್ಟ್ ನಲ್ಲಿದ್ದರು ಎಂದು ಎಸ್ ಐಟಿ ತಿಳಿಸಿದೆ.
ಶಂಕಿತ ಆರೋಪಿಗಳಿಂದ ಎಸ್ ಐಟಿ ಅಧಿಕಾರಿಗಳು ಡೈರಿಯೊಂದು ವಶಪಡಿಸಿಕೊಂಡಿದ್ದು, ಅದರಲ್ಲಿ ಈ ಸಾಹಿತಿಗಳ ಮತ್ತು ಪ್ರಗತಿಪರರ ಹೆಸರು ಬರೆಯಲಾಗಿತ್ತು ಎಂದು ಎಸ್ ಐಟಿ ಮೂಲಗಳು ಪಿಟಿಐಗೆ ತಿಳಿಸಿವೆ.
ಡೈರಿಯಲ್ಲಿ ಕೆಲವು ಕೋಡ್ ವರ್ಡ್ ಗಳನ್ನು ಬಳಸಲಾಗಿದ್ದು, ಅವುಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ಹೇಳಿದ್ದಾರೆ.
ನಿನ್ನೆಯಷ್ಟೇ ಗೌರಿ ಲಂಕೇಶ್ ಹತ್ಯೆಯ ಪ್ರಮುಖ ಆರೋಪಿ ಪರಶುರಾಮ್ ವಾಗ್ಮೋರೆಯನ್ನು ಎಸ್ ಐಟಿ ಅಧಿಕಾರಿಗಳು ಬಂಧಿಸಿದ್ದು, ಆತನೇ ಗೌರಿ ಲಂಕೇಶ್‌ ಮೇಲೆ ಗುಂಡು ಹಾರಿಸಿದ್ದು ಎಂದು ವಾದಿಸಿದೆ.
ಇನ್ನೂ, ಗೌರಿ ಹತ್ಯೆಯ ಪ್ರಮುಖ ಆರೋಪಿ ಪರಶುರಾಮ್ ವಾಗ್ಮೋರೆಯನ್ನ ಎಸ್ ಐಟಿ ತಂಡ ತೀವ್ರ ವಿಚಾರಣೆಗೆ ಒಳಪಡಿಸಿದೆ. ಆದರೆ, ವಿಚಾರಣೆ ವೇಳೆ ಆತ ಗೊಂದಲದ ಹೇಳಿಕೆ ನೀಡುತ್ತಿದ್ದಾನೆ. ಗೌರಿಯನ್ನ ಶೂಟ್ ಮಾಡಿದ ಬಳಿಕ ಅಮೋಲ್ ಕಾಳೆಗೆ ರಿವಾಲ್ವರ್ ಕೊಟ್ಟಿರುವುದಾಗಿ ಪರಶುರಾಮು ಈ ಮೊದಲು ಹೇಳಿಕೆ ನೀಡಿದ್ದ. ಆದರೆ, ಈಗ ಆ ರಿವಾಲ್ಹರ್ ಯಾರಿಗೆ ಕೊಟ್ಟೆ ಅಂತ ನೆನಪಾಗುತ್ತಿಲ್ಲ ಅಂತಿದ್ದಾನೆ. ಸದ್ಯ ಪರಶುರಾಮ್ ಜೊತೆ ಅಮೋಲ್ ಕಾಳೆ ವಿಚಾರಣೆಯೂ ನಡೆಯುತ್ತಿದೆ.
SCROLL FOR NEXT