ಮಾಲೂರು: ಕಾನ್ವೆಂಟ್ ಶಾಲೆ ಬೇಡ ಎಂದದ್ದಕ್ಕೆ 3 ಮಕ್ಕಳನ್ನು ಕೆರೆಗೆ ದೂಡಿ ತಾಯಿ ಆತ್ಮಹತ್ಯೆ
ಮಾಲೂರು(ಕೋಲಾರ): ಮಕ್ಕಳು ಕಾನ್ವೆಂಟ್ ಶಾಲೆ ಸೇರುವುದು ಬೇಡ ಎಂದ ಪತಿಯ ವಿರುದ್ದ ಕೋಪಗೊಂಡ ಮಹಿಳೆ ತನ್ನ ಮೂವರು ಮಕ್ಕಳನ್ನು ಕೆರೆಗೆ ದೂಡಿ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೋಲಾರ ಜಿಲ್ಲೆ ಮಾಲೂರಿನಲ್ಲಿ ನಡೆದಿದೆ.
ಮಾಲೂರು ಮಾಸ್ತಿ ಠಾಣಾ ವ್ಯಾಪ್ತಿಯ ಟೇಕಲ್ ಹೋಬಳಿಯ ನಕ್ಕನಹಳ್ಳಿ ನಿವಾಸಿ ಪಾರ್ವತಮ್ಮ(25) ಆತ್ಮಹತ್ಯೆಗೆ ಶರಣಾಗಿದ್ದು ತನ್ನ ಮೂವರು ಮಕ್ಕಳಾದ ಜೀವನ್(7), ಚಂದನ(5) ಹಾಗೂ ಅಕ್ಷಯ್(3) ಕೆರೆಗೆ ತಳ್ಳಿ ಕೊಂದ ಬಳಿಕ ತಾನೂ ಕೆರೆಗೆ ಹಾರಿದ್ದಾರೆ.
ಪತಿ ಮಂಜುನಾಥ್ ಮೇಲಿನ ಸಿಟ್ಟಿನಿಂದ ಪಾರ್ವತಮ್ಮ ಈ ಕೃತ್ಯ ಎಸಗಿದ್ದಳೆಂದು ಪೋಲೀಸರು ತನಿಖೆಯ ವೇಳೆ ಕಂಡುಕೊಂಡಿದ್ದಾರೆ. ಖಾಸಗಿ ಶಾಲೆಗೆ ಮಕ್ಕಳನ್ನು ಸೇರಿಸಬೇಕೆನ್ನುವ ಹಠದಿಂದ ಮಂಜುನಾಥ್ ಜತೆ ಆಕೆ ಜಗಳವಾಡಿದ್ದಳು. ಆದರೆ ಆರ್ಥಿಕ ಸಮಸ್ಯೆಯ ಕಾರಣ ಕಾನ್ವೆಂಟ್ ಶಾಲೆಗೆ ಬೇಡ ಎಂದು ಪತಿ ಹೇಳಿದ್ದರು. ಇದೇ ಸಂಬಂಧ ತನ್ನ ತವರು ಮನೆಗೆ ದೂರು ನೀಡಿದ್ದ ಪಾರ್ವತಮ್ಮನಿಗೆ ಆಕೆಯ ತವರು ಮನೆಯವರು ಸಹ ಗಂಡನ ಪರಿಸ್ಥಿತಿ ಅರಿತು ಬಾಳುವೆ ನಡೆಸುವಂತೆ ಹೇಳಿದ್ದಾರೆ.
ಇದರಿಂದ ಬೇಸತ್ತ ಪಾರ್ವತಮ್ಮ ಗುರುವಾರ ಮಕ್ಕಳನ್ನು ಹೊರಗೆ ಕರೆದೊಯ್ಯುವ ನೆಪದಲ್ಲಿ ಕೆರೆಯ ಬಳಿ ಬಂದು ಮಕ್ಕಳನ್ನು ನೀರಿಗೆ ದೂಡಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಪಾರ್ವತಮ್ಮ ಹಾಗೂ ಕಡೆಯ ಮಗ ಅಕ್ಷಯ್ ಮೃತದೇಹಗಳು ಗುರುವಾರ ಸಂಜೆ ಕೆರೆಯಲ್ಲಿ ತೇಲುತ್ತಿದ್ದದ್ದು ಕಂಡ ಗ್ರಾಮಸ್ಥರಿಗೆ ಘಟನೆ ಬಗೆಗೆ ಅರಿವಾಗಿದೆ. ಇದಾಗಿ ಮತ್ತಿಬ್ಬರು ಮಕ್ಕಳ ದೇಹಗಳು ಶುಕ್ರವಾರ ಬೆಳಿಗ್ಗೆ ಪತ್ತೆಯಾಗಿದ್ದು ಮುಗ್ದ ಮಕ್ಕಳ ಜೀವ ತೆಗೆದ ತಾಯಿಯ ನಿರ್ಧಾರಕ್ಕೆ ಕುಟುಂಬ ಸದಸ್ಯರು, ಗ್ರಾಮಸ್ಥರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಮಾಸ್ತಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ,.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics