ಬೆಂಗಳೂರು: ರಾಜ್ಯದ ಮಾಜಿ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಮನೆಯಲ್ಲಿ 25 ಲಕ್ಷ ರು. ವಸ್ತುಗಳ ಕಳವು
ಬೆಂಗಳೂರು: ಕರ್ನಾಟಕದ ಮಾಜಿ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಅವರ ಮನೆಯಲ್ಲಿ ಕಳ್ಳತನ ನಡೆದಿದೆ. ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್ 6ನೇ ಹಂತದ ಎಂಸಿಎಚ್‌ಎಸ್ ಲೇಔಟ್ ನಲ್ಲಿರುವ ಮುಖರ್ಜಿ ಅವರ ನಿವಾಸಕ್ಕೆ ಕನ್ನ ಹಾಕಿದ್ದ ದುಷ್ಕರ್ಮಿಗಳು 25 ಲಕ್ಷ ಮೌಲ್ಯದ ಚಿನ್ನ ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗಿದ್ಡಾರೆ.
ನಿವೃತ್ತ ಐಪಿಎಸ್ ಅಧಿಕಾರಿ ಎಮ್ ವಿ. ಮೂರ್ತಿ ಅವರ ಮನೆಯಲ್ಲಿ ಕಳ್ಳತನವಾದ ನಾಲ್ಕು ದಿನಗಳ ಬಳಿಕ ಈ ಘಟನೆ ನಡೆದಿದೆ.
ಶನಿವಾರ ಸಂಜೆ ಘಟನೆ ನಡೆದಿದ್ದು ಬೆಳಿಗ್ಗೆ 11 ಗಂಟೆಗೆ ಕೌಶಿಕ್ ಮುಖರ್ಜಿ ದಂಪತಿಗಳು ಮನೆಗೆ ಬೀಗ ಹಾಕಿ ಸ್ನೇಹಿತರ ಮನೆಗೆ ಹೋಗಿದ್ದವರು ರಾತ್ರಿ 11ಕ್ಕೆ ವಾಪಾಸಾಗಿದ್ದಾರೆ. ಅವೇಳೆ ಕಳವಾಗಿರುವುದು ಪತ್ತೆಯಾಗಿದ್ದು ತಕ್ಷಣ ಎಚ್‌ಎಸ್‌ಆರ್ ಲೇಔಟ್ ಪೋಲೀಸರಿಗೆ ಮಾಹಿತಿ ತಿಳಿಸಿದ್ದಾರೆ.
ದರೋಡೆಕೋರರು ದುಬಾರಿ ಕೈಗಡಿಯಾರಗಳು, ಕಿವಿಯೋಲೆಗಳು, ಆರು ಚಿನ್ನದ ಬಳೆ ಮತ್ತು ಮೂರು ವಜ್ರದ ಉಂಗುರ ಸೇರಿದಂತೆ 25 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ದೋಚಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೋಲೀಸರು ಮೂರ್ತಿ ಹಾಗೂ ಮುಖರ್ಜಿ ಮನೆಗಳ ಕಳವು ಮಾಡಿರುವುದು ಒಂದೇ ದರೋಡೆಕೋರರ ಗುಂಪು ಇರಬಹುದೆಂದು ಶಂಕೆ ವ್ಯಕ್ತಪಡಿಸಿದ್ದಾರೆ. ಮುಖರ್ಜಿ ಅವರ ಮನೆ ಹಿಂಭಾಗದಲ್ಲಿ ಸಣ್ಣ ಉದ್ಯಾನವೊಂದಿದ್ದು ಅದರ ಕಂಪುಂಡ್ ಜಿಗಿದು ಮುಖರ್ಜಿ ಅವರ ಮನೆ ಹಿಂಬಾಗಿಲ ಮೂಲಕ ಪ್ರವೇಶಿಸಿರಬಹುದು ಎಂದು ಪೋಲೀಸರು ವಿವರಿಸಿದರು.
ಮಡಿವಾಳ ಉಪವಿಭಾಗದ ಎಸಿಪಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ ಮನೆ ಮುಂದಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸುತ್ತಿದ್ದು ಜೂನ್ 15 ಮತ್ತು 16ರಂದು ಮನೆ ಸುತ್ತಲೂ ಅನುಮಾನಾಸ್ಪದವಾಗಿ ಸಂಚರಿಸಿದ್ದ ಮೂವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೋಲೀಸರು ಮಾಹಿತಿ ನೀಡಿದ್ದಾರೆ.