ಬೆಂಗಳೂರು: ಬೆಂಗಳೂರಿನಲ್ಲಿ ಮೊದಲ ಬಾರಿಗೆ ಹೆಲಿ-ಟ್ಯಾಕ್ಸಿ ಸೇವೆ ಪ್ರಾರಂಭವಾಗಿದ್ದು, ಎಲೆಕ್ಟ್ರಾನಿಕ್ ಸಿಟಿ ಹಾಗೂ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(ಕೆಐಎ) ನಡುವೆ ಸಂಪರ್ಕ ಕಲ್ಪಿಸುವ ಹೆಲಿ-ಟ್ಯಾಕ್ಸಿಗೆ ಪ್ರಯಾಣಿಕರು ಮನಸೋತಿದ್ದಾರೆ.
ಪ್ರಯಾಣದ ಸಮಯವನ್ನು ಕಡಿಮೆ ಮಾಡುವುದರೊಂದಿಗೆ ಬೆಂಗಳೂರು ಮಹಾನಗರದ ವೈಮಾನಿಕ ನೋಟ ನೋಡಲು ಸಿಗುವುದು ಹೆಲಿ-ಟ್ಯಾಕ್ಸಿ ಸೇವೆಯಿಂದ ಪ್ರಯಾಣಿಕರಿಗೆ ಸಿಗುವ ಮತ್ತೊಂದು ಆಹ್ಲಾದಕರ ಅನುಭವಾಗಿದೆ.
ತಂಬಿ ಏವಿಯೇಷನ್ ಪ್ರೈವೇಟ್ ಲಿಮಿಟೆಡ್ ಈ ಸೇವೆ ಒದಗಿಸುತ್ತಿದ್ದು, 3,500 ರೂಪಾಯಿಯೊಂದಿಗೆ ಪ್ರತ್ಯೇಕವಾಗಿ ಜಿಎಸ್ ಟಿ ತೆರಿಗೆಯ ದರ ನಿಗದಿಪಡಿಸಲಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಎಎಲ್ ವಿಮಾನ ನಿಲ್ದಾಣದಿಂದ ಕೆಐಎಎಲ್ ಗೂ ಹೆಲಿ-ಟ್ಯಾಕ್ಸಿ ಸೇವೆ ಒದಗಿಸಲು ತಂಬಿ ಏವಿಯೇಷನ್ ಚಿಂತನೆ ನಡೆಸಿದೆ.
ಎಲೆಕ್ಟ್ರಾನಿಕ್ ಸಿಟಿ-ಕೆಂಪೇಗೌಡ ವಿಮಾನ ನಿಲ್ದಾಣದ ನಡುವೆ ಸಂಚರಿಸಲು ಪ್ರಯಾಣಿಕರಿಗೆ 2.5 ಗಂಟೆ ಸಮಯ ತೆಗೆದುಕೊಳ್ಳುತ್ತಿತ್ತು. ಆದರೆ ಹೆಲಿ-ಟ್ಯಾಕ್ಸಿಯಿಂದಾಗಿ 15 ನಿಮಿಷಗಳಲ್ಲಿ ವಿಮಾನ ನಿಲ್ದಾಣ ತಲುಪಬಹುದಾಗಿದೆ.
ಕಳೆದ 17 ವರ್ಷಗಳಿಂದ ಬೆಂಗಳೂರಿನಲ್ಲೇ ಇದ್ದೇನೆ, ಆದರೆ ನಮ್ಮ ನಗರದಲ್ಲಿ ಈ ಪ್ರಮಾಣದ ಹಸಿರು ಹಾಗೂ ಕೆರೆಗಳಿವೆ ಎಂದು ಗೊತ್ತಿರಲಿಲ್ಲ. ಹೆಲಿ-ಟ್ಯಾಕ್ಸಿ ಬಳಕೆ ಮಾಡಿದಾಗ ನಗರದ ವೈಮಾನಿಕ ನೋಟ ಸಿಕ್ಕಿತು. ವಾರಕ್ಕೆ ಎರಡು ದಿನಗಳು ಬೆಂಗಳೂರಿನಿಂದ ಮುಂಬೈ ಗೆ ಸಂಚರಿಸುತ್ತೇನೆ, ಹೆಲಿ-ಟ್ಯಾಕ್ಸಿ ಸೇವೆಯನ್ನು ಇನ್ನು ಮುಂದೆ ಆಗಾಗ್ಗೆ ಬಳಕೆ ಮಾಡುತ್ತೇನೆ ಎಂದು ಉದ್ಯಮಿ ಅಬ್ದುಲ್ ಹದಿ ಹೇಳಿದ್ದಾರೆ.
ಎಲೆಕ್ಟ್ರಾನಿಕ್ ಸಿಟಿ ನಿವಾಸಿಯಾದ ಸುರೇಶ್ ಬಾಬು ಸಹ ಹೆಲಿ-ಟ್ಯಾಕ್ಸಿ ಸೇವೆಗೆ ಮೆಚ್ಚುಗೆ ಸೂಚಿಸಿದ್ದು, ಪ್ರಯಾಣ ದರ ಸ್ವಲ್ಪ ಹೆಚ್ಚಾದರೂ ಮೌಲ್ಯಯುತವಾದದ್ದು ಎಂದು ಅಭಿಪ್ರಾಯಪಟ್ಟಿದ್ದಾರೆ. ಒಟ್ಟಾರೆ ಬೆಂಗಳೂರಿಗೆ ಹೊಸದಾಗಿ ಪರಿಚಯವಾಗಿರುವ ಹೆಲಿ-ಟ್ಯಾಕ್ಸಿ ನಗರವಾಸಿಗಳನ್ನು ಹೆಚ್ಚು ಆಕರ್ಷಿಸುತ್ತಿದೆ.