ಸಂಗ್ರಹ ಚಿತ್ರ 
ರಾಜ್ಯ

ಕೇರಳ ಒತ್ತಡಕ್ಕೆ ಮಣಿಯದ ಸರ್ಕಾರ, ಬಂಡೀಪುರದಲ್ಲಿ ರಾತ್ರಿ ಸಂಚಾರ ನಿಷೇಧ ಮುಂದುವರಿಕೆ

ಬಂಡೀಪುರ ಹುಲಿ ರಕ್ಷಿತಾರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಹಾದು ಹೋಗಿರುವ ಹೆದ್ದಾರಿಗಳಲ್ಲಿ ರಾತ್ರಿ ಸಂಚಾರ ಪುನರಾಂಭಿಸುವ ಕೇರಳ ಸರ್ಕಾರದ ಮನವಿಯನ್ನು ಕರ್ನಾಟಕ ಸರ್ಕಾರ ಮತ್ತೆ ತಿರಸ್ಕರಿಸಿದೆ.

ಬೆಂಗಳೂರು: ಬಂಡೀಪುರ ಹುಲಿ ರಕ್ಷಿತಾರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಹಾದು ಹೋಗಿರುವ ಹೆದ್ದಾರಿಗಳಲ್ಲಿ ರಾತ್ರಿ ಸಂಚಾರ ಪುನರಾಂಭಿಸುವ ಕೇರಳ ಸರ್ಕಾರದ ಮನವಿಯನ್ನು ಕರ್ನಾಟಕ ಸರ್ಕಾರ ಮತ್ತೆ ತಿರಸ್ಕರಿಸಿದೆ.
ಬಂಡೀಪುರ ಹುಲಿ ರಕ್ಷಿತಾರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 212 ಹಾಗೂ 67ರಲ್ಲಿ ರಾತ್ರಿ ವೇಳೆ ವಾಹನ ಸಂಚಾರ ನಿರ್ಬಂಧ ಸಡಿಲಿಸುವ ಕೇರಳದ ಒತ್ತಡಕ್ಕೆ ಮಣಿಯದ ರಾಜ್ಯ ಸರ್ಕಾರ ಯಥಾಸ್ಥಿತಿ ಕಾಯ್ದುಕೊಳ್ಳಲು ತೀರ್ಮಾನಿಸಿದೆ. ವನ್ಯ ಜೀವಿಗಳ ಸುರಕ್ಷತೆ ಹಿನ್ನೆಲೆಯಲ್ಲಿ, ಹೈಕೋರ್ಟ್‌ ಆದೇಶದಂತೆ 2010ರಲ್ಲಿ ರಾಷ್ಟ್ರೀಯ ಹೆದ್ದಾರಿ 212 (ಗುಂಡ್ಲುಪೇಟೆ-ವೈನಾಡ್‌ ಮಾರ್ಗ) ಹಾಗೂ ರಾಷ್ಟ್ರೀಯ ಹೆದ್ದಾರಿ 67ರಲ್ಲಿ (ಗುಂಡ್ಲುಪೇಟೆ-ಊಟಿ ಮಾರ್ಗ) ರಾತ್ರಿ 9ರಿಂದ ಬೆಳಗ್ಗೆ 6ರವರೆಗೆ ವಾಹನ ಸಂಚಾರವನ್ನು ಸಂಪೂರ್ಣವಾಗಿ ಬಂದ್‌ ಮಾಡಲಾಗಿದೆ. 
ಆದರೆ ಈ ರಸ್ತೆ ಮಾರ್ಗವನ್ನು ವಾಹನ ಸಂಚಾರಕ್ಕೆ ಸಂಪೂರ್ಣವಾಗಿ ಮುಕ್ತಗೊಳಿಸುವಂತೆ ಕೇರಳ ಸರ್ಕಾರ ಹಲವು ವರ್ಷಗಳಿಂದ ರಾಜ್ಯ ಸರ್ಕಾರದ ಮೇಲೆ ಒತ್ತಡ ಹಾಕುತ್ತಿದೆ. ಈ ಸಂಬಂಧ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು 5 ಬಾರಿ ಭೇಟಿ ಮಾಡಿ ಚರ್ಚೆ ನಡೆಸಿ, ರಾತ್ರಿ ವೇಳೆ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡಲು ಕೋರ್ಟ್‌ಗೆ ಅರ್ಜಿ ಸಲ್ಲಿಸುವಂತೆ ಮನವಿ ಮಾಡಿದ್ದರು.
ಅದರಂತೆ ಮಂಗಳವಾರ ಅರಣ್ಯ ಭವನದಲ್ಲಿ ಉನ್ನತ ಮಟ್ಟದ ಸಭೆ ನಡೆಸಲಾಯಿತಾದರೂ, ಸಂರಕ್ಷಿತಾರಣ್ಯ ಪ್ರದೇಶದಲ್ಲಿ ರಾತ್ರಿ ವೇಳೆ ವಾಹನಸಂಚಾರ ಬೇಡ ಎಂಬ ತೀರ್ಮಾನಕ್ಕೆ ಬರಲಾಗಿದೆ. ನಿನ್ನೆ ನಡೆದ ಸಭೆಯಲ್ಲಿ ಕೇರಳ, ತಮಿಳುನಾಡು ಹಾಗೂ ರಾಷ್ಟ್ರೀಯ ಹೆದ್ದಾರಿ ಸಚಿವಾಲಯದ ಅಧಿಕಾರಿಗಳು, ಕರ್ನಾಟಕದ ಅಧಿಕಾರಿಗಳು ಹಾಗೂ ಪರಿಸರವಾದಿಗಳು ಪಾಳ್ಗೊಂಡಿದ್ದರು. ರಾತ್ರಿ ವೇಳೆ ವಾಹನ ಸಂಚಾರ ಪುನಾರಂಭಿಸುವ ಪ್ರಸ್ತಾವಕ್ಕೆ ಪರಿಸರವಾದಿಗಳು ಹಾಗೂ ವನ್ಯಜೀವಿ ಸಂರಕ್ಷಕರು ತೀವ್ರ ವಿರೋಧ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ನಿರ್ಬಂಧ ಮುಂದುವರಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆ ಬಳಿಕ ಮಾತನಾಡಿದ ಕೇರಳದ ಅಧಿಕಾರಿಗಳು, 'ಬಂಡೀಪುರ ಹುಲಿ ರಕ್ಷಿತಾರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ರಾತ್ರಿ ವೇಳೆ ಸಂಚಾರ ನಿರ್ಬಂಧವನ್ನು ಸಡಿಲಗೊಳಿಸಬೇಕು. ಅಥವಾ ಸಂಚಾರ ನಿರ್ಬಂಧದ ಅವಧಿಯನ್ನು ಕಡಿತಗೊಳಿಸಬೇಕು. ಹೆದ್ದಾರಿಯನ್ನು ವಿಸ್ತರಣೆ ಮಾಡಿ, ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಅವಕಾಶ ನೀಡಬೇಕು. ಈ ಮಾರ್ಗಗಳಲ್ಲಿ ಸದ್ಯ 16 ಬಸ್‌ಗಳು ಓಡಾಡುತ್ತಿವೆ. ಬದಲಿಗೆ ಹೆಚ್ಚು ಬಸ್‌ಗಳ ಓಡಾಟಕ್ಕೆ ಅವಕಾಶ ಕಲ್ಪಿಸಬೇಕು' ಎಂದು ಹೇಳಿದರು.
ಆದರೆ ಕೇರಳದ ಈ ಬೇಡಿಕೆಗಳನ್ನು ನಿರಾಕರಿಸಿದ ರಾಜ್ಯದ ಅರಣ್ಯ ಅಧಿಕಾರಿಗಳು,''ಹೆದ್ದಾರಿಗಳು ಹುಲಿ ರಕ್ಷಿತಾರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಹಾದು ಹೋಗಿದೆ. ಈ ಅರಣ್ಯಪ್ರದೇಶದಲ್ಲಿ ಅತಿ ಹೆಚ್ಚು ಹುಲಿಗಳಿವೆ. ರಾತ್ರಿ ವೇಳೆ ಆನೆ ಸೇರಿದಂತೆ ನಾನಾ ಪ್ರಾಣಿಗಳ ಸಂಚಾರ ಹೆಚ್ಚಿದೆ. ಈಗಾಗಲೇ ಹಲವು ವನ್ಯಜೀವಿಗಳು ರಸ್ತೆ ಅಪಘಾತದಲ್ಲಿ ಮೃತಪಟ್ಟಿವೆ. ಬಂಡೀಪುರ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಅಪರೂಪದ ವನ್ಯಜೀವಿ ಸಂಕುಲವಿದ್ದು, ಹೈಕೋರ್ಟ್‌ನ ಆದೇಶದಂತೆ ರಾತ್ರಿ ವೇಳೆ ಸಂಚಾರ ನಿರ್ಬಂಧ ಮಾಡಲಾಗಿದೆ. ಆದ್ದರಿಂದ ಯಾವುದೇ ಕಾರಣಕ್ಕೂ ನಿರ್ಬಂಧ ತೆರವುಗೊಳಿಸಲು ಸಾಧ್ಯವಿಲ್ಲ. ಜತೆಗೆ ರಸ್ತೆ ಅಭಿವೃದ್ಧಿ ಹಾಗೂ ಹೆಚ್ಚು ಬಸ್‌ಗಳ ಸಂಚಾರಕ್ಕೆ ಅವಕಾಶ ಕಲ್ಪಿಸುವುದೂ ಸಾಧ್ಯವಿಲ್ಲ'' ಎಂದು ಅರಣ್ಯದ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ ಸಿ.ಜಯರಾಮ್ ಸ್ಪಷ್ಟಪಡಿಸಿದರು.
ಸಭೆಯಲ್ಲಿ ರಾಜ್ಯದ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪುನಟಿ ಶ್ರೀಧರ್‌, ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಸಿ.ಜಯರಾಂ ಮೊದಲಾದವರು ಹಾಜರಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಬೆಂಗಳೂರು ಟೆಕ್ ಸಮ್ಮಿಟ್ 2025'ಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

Delhi blast: ಸ್ಫೋಟಕ್ಕೂ ಮುನ್ನ 'ಆತ್ಮಾಹುತಿ ಬಾಂಬ್ ದಾಳಿ' ಬಗ್ಗೆ ಮಾತಾಡಿದ ಡಾ. ಉಮರ್; ವಿಡಿಯೋದಲ್ಲಿ ಉಗ್ರ ಹೇಳಿದ್ದೇನು?

ಆಂಧ್ರ ಪ್ರದೇಶ: ಮೋಸ್ಟ್ ವಾಂಟೆಂಡ್ ನಕ್ಸಲ್ ಕಮಾಂಡರ್ ಮದ್ವಿ ಹಿದ್ಮಾ ಸೇರಿ ಆರು ಮಂದಿ ಎನ್‌ಕೌಂಟರ್‌ಗೆ ಬಲಿ

ನನ್ನ ಹೆತ್ತವರಿಗೆ ಮಾನಸಿಕ ಕಿರುಕುಳ ನೀಡಿದ್ದರೆ ತನಿಖೆಗೆ ಆದೇಶಿಸಿ; ಕೇಂದ್ರ, ಬಿಹಾರ ಸರ್ಕಾರಕ್ಕೆ ತೇಜ್ ಪ್ರತಾಪ್ ಯಾದವ್ ಒತ್ತಾಯ

Delhi Red Fort blast: ಅಲ್-ಫಲಾಹ್ ವಿಶ್ವವಿದ್ಯಾಲಯದ ಕಚೇರಿ-25 ಸ್ಥಳಗಳ ಮೇಲೆ ED ದಾಳಿ, ತೀವ್ರ ಶೋಧ..!

SCROLL FOR NEXT