ಬೆಂಗಳೂರು : ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇದೇ ತಿಂಗಳ 22 ರಂದು ನಮ್ಮ ಮೆಟ್ರೋ ರೈಲು ನಿಗಮದ ನೌಕರರು ಮುಷ್ಕರಕ್ಕೆ ಕರೆ ನೀಡಿದ್ದು, ಎಸ್ಮಾ ಮೇಲಿನ ತಡೆಯಾಜ್ಞೆ ತೆರವುಗೊಳಿಸುವಂತೆ ಒತ್ತಾಯಿಸಿ ಹೈಕೋರ್ಟಿಗೆ ಅರ್ಜಿ ಸಲ್ಲಿಸಲು ಬಿಎಂಆರ್ ಸಿಎಲ್ ನಿರ್ಧರಿಸಿದೆ.
ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಮಹೇಂದ್ರ ಜೈನ್ . ಎಸ್ಮಾ ತಡೆಯಾಜ್ಞೆ ತೆರವುಗೊಳಿಸುವ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವಂತೆ ಕಾನೂನು ತಜ್ಞರೊಂದಿಗೆ ಮಾತುಕತೆ ನಡೆಸಲಾಗಿದೆ . ಇಂದು ಅಥವಾ ನಾಳೆ ಈ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಜುಲೈ 7 2017 ರಂದು ಮುಷ್ಕರಕ್ಕೆ ಕರೆ ನೀಡಿದ್ದ ಮೆಟ್ರೋ ನೌಕರರ ಮೇಲೆ ಎಸ್ಮಾ ಜಾರಿಗೊಳಿಸಲು ಬಿಎಂಆರ್ ಸಿಎಲ್ ಮುಂದಾದ ಹಿನ್ನೆಲೆಯಲ್ಲಿ ಹೈಕೋರ್ಟ್ ನವೆಂಬರ್ 7, 2017 ರಂದು ತಡೆಯಾಜ್ಞೆ ನೀಡಿತ್ತು. ಮುಷ್ಕರಕ್ಕೆ ಐಎನ್ ಟಿಯುಸಿ ಬೆಂಬಲವಿದ್ದು, ಮೆಟ್ರೋ ನೌಕರರೊಂದಿಗೆ ಮಾತ್ರ ಮಾತುಕತೆ ನಡೆಸಲಾಗುವುದು ಎಂದು ತಿಳಿಸಿದರು.
ಒಂದು ವೇಳೆ ಮೆಟ್ರೋ ನೌಕರರು ಮುಷ್ಕರಕ್ಕೆ ಮುಂದಾದರೆ, ಪರ್ಯಾಯ ಕ್ರಮ ಕೈಗೊಳ್ಳಲಾಗುವುದು, ಯಾವುದೇ ಕಾರಣಕ್ಕೂ ರೈಲು ಸಂಚಾರದಲ್ಲಿ ವ್ಯತ್ಯಯವಾಗಲಾರದು. ಆ ದಿನ ಕೆಲಸಕ್ಕೆ ಹಾಜರಾಗುವ ಎಲ್ಲಾ ನೌಕರರಿಗೂ ಸೂಕ್ತ ಭದ್ರತೆ ಒದಗಿಸಲಾಗುವುದು . ಸಾರ್ವಜನಿಕರು ಮುಷ್ಕರದಲ್ಲಿ ಪಾಲ್ಗೊಳ್ಳದೆ ಮೆಟ್ರೋ ರೈಲಿನಲ್ಲಿ ಸಂಚರಿಸಬೇಕೆಂದು ಮಹೇಂದ್ರ ಜೈನ್ ಹೇಳಿದರು.
ಬಿಎಂಆರ್ ಸಿಎಲ್ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಯು.ಎ. ವಸಂತ್ ರಾವ್ ಮಾತನಾಡಿ, ಮೆಟ್ರೋ ಸೇವಾ ವಿಭಾಗದ ಪ್ರಮುಖ ಭಾಗವಾಗಿದೆ. ಇದು ಸ್ಥಗಿತಗೊಂಡರೆ, ನೂರಾರು ಮಂದಿ ಜನರ ದೈನಂದಿನ ಬದುಕಿನ ಮೇಲೆ ಪರಿಣಾಮ ಬೀರಲಿದೆ ಎಂದು ತಿಳಿಸಿದರು.