ರಾಜ್ಯ

ಸ್ಮಶಾನದಲ್ಲಿ ಪೋಲಿಂಗ್ ಬೂತ್: ಮತದಾನ ಮಾಡದೇ ತೆರಳಿದ ನಾಗರಿಕರು!

Shilpa D
ಬೆಂಗಳೂರು: ಮತದಾನ ಮಾಡುವ ಸ್ಥಳವೆಂದರೇ ಅಲ್ಲಿ, ಬೆಳಕು ಗಾಳಿ ಚೆನ್ನಾಗಿ ಬರಬೇಕು, ಜೊತೆಗೆ ವಿಕಲಾಂಗರಿಗೆ ಹಾಗೂ ವಯೋವೃದ್ದ ಸ್ನೇಹಿಯಾಗಿರಬೇಕು. ಮುಖ್ಯ ರಸ್ತೆಗೆ ಸಮೀಪವಿರಬೇಕು.
ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಹಲವು ಮಂದಿ ಪೋಲಿಂಗ್ ಬೂತ್ ಗೆ ಬಂದು ಮತದಾನ ಮಾಡದೇ ವಾಪಸ್ ತೆರಳಿರುವ ಘಟನೆ ವರದಿಯಾಗಿದೆ. ಸ್ಮಶಾನದಲ್ಲಿ ಮತದಾನ ಕೇಂದ್ರ ಇದ್ದಿದ್ದರಿಂದ ಕೆಲ ಸಂಪ್ರದಾಯವಾದಿಗಳು ಒಳಗೆ ಹೋಗಿ ಮತ ಚಲಾಯಿಸದೇ ವಾಪಸ್ ಹೋಗಿದ್ದಾರೆ.
ಮೈಸೂರು ರಸ್ತೆಯ ಚಾಮರಾಜಪೇಟೆ  ಹಿಂದೂಗಳ ರುದ್ರ ಭೂಮಿಯಲ್ಲಿ  ಮತ ಕೇಂದ್ರ ನಿರ್ಮಿಸಲಾಗಿತ್ತು. ಚಾಮರಾಜಪೇಟೆ ವಿಧಾನ ಸಭೆ ಕ್ಷೇತ್ರದಲ್ಲಿ ಶೇ. 60 ರಷ್ಟು ಮತದಾನವಾಗಿದೆ. ಈ ಮತಕೇಂದ್ರದಲ್ಲಿ  1,246 ಮತದಾರರ ಪೈಕಿ ಕೇವಲ 600 ಮತ ಮಾತ್ರ ಚಲಾವಣೆಯಾಗಿವೆ, ಶೇ,50 ರಷ್ಟು ಕಡಿಮೆಯಾಗಿದೆ. 
ನನ್ನ ಜಾತಿಯಲ್ಲಿ ಮಹಿಳೆಯರು ಸ್ಮಶಾನ ಪ್ರವೇಶಿಸುವಂತಿಲ್ಲ, ಹೀಗಾಗಿ ನನ್ನ ಪತ್ನಿ ಮತ ಚಲಾಯಿಸಿಲ್ಲ, ಹಾಗೆಯೇ ನನ್ನ ಮಗ ಇದೇ ಮೊದಲ ಬಾರಿಗೆ ಮತದಾನ ಮಾಡಲು ಬಂದಿದ್ದ, ಆದರೇ ತಂದೆ ತಾಯಿ ಬದುಕಿರುವವರು ಸ್ಮಶಾನಕ್ಕೆ ಹೋಗಬಾರದೆಂಬ ಸಂಪ್ರದಾಯವಿದೆ. ಹೀಗಾಗಿ ನನ್ನ ಮಗ ಕೂಡ ಮತ ಚಲಾಯಿಸಿಲ್ಲ, ಹಲವು ಪೀಳಿಗೆಯಿಂದ ಇದನ್ನು ಪಾಲಿಸಿಕೊಂಡು ಬಂದಿದ್ದೇವೆ ಎಂದು ವ್ಯಕ್ತಿಯೊಬ್ಬರು ಹೇಳಿದ್ದಾರೆ.
ಎಲ್ಲರು ಮತದಾನ ಮಾಡಲು ಬಯಸಿದ್ದರು,  ಆದರೇ ಇದೊಂದು ವಿಭಿನ್ನವಾದ ಮತಕೇಂದ್ರ ವಾಗಿದೆ. ಹೀಗಾಗಿ ಭಯದಿಂದ ಒಬ್ಬರೇ ಬರದೇ ಎಲ್ಲರೂ ಒಟ್ಟೊಟ್ಟಾಗಿ ಬಂದಿದ್ದೇವೆ ಎಂದು ಚಾಮರಾಜ ಪೇಟೆ ನಿವಾಸಿಯೊಬ್ಬರು ತಿಳಿಸಿದರು.
ಒಮ್ಮೆ ಸ್ಮಶಾನ ಪ್ರವೇಶಿಸಿದರೇ ನಾವು ಸ್ನಾನ ಮಾಡಿ ದೇವಾಸ್ಥಾನಕ್ಕೆ ಹೋಗಿ ಬರಬೇಕು. ಸಂಜೆ ನನ್ನ ತಂಗಿ ಮನೆಗೆ ಒಂದು ವಿಶೇಷವಾದ ಕಾರ್ಯಕ್ರಮಕ್ಕೆ ಹೋಗಬೇಕು, ಆದರೆ ಸ್ಮಶಾನದ ಒಳಗೆ ಹೋಗಬೇಕಾದ ಕಾರಣ ನಾನು ಮತ ಚಲಾಯಿಸಿಲ್ಲ ಎಂದು ನಂಜಾಂಬ ಅಗ್ರಹಾರದ ಮನೋಹರ್ ರಾವ್ ಹೇಳಿದ್ದಾರೆ.
ಇನ್ನೂ ಚುನಾವಣಾ ಕರ್ತವ್ಯ ನಿರ್ವಹಿಸಲು ಬಂದಿದ್ದ ಸಿಬ್ಬಂದಿಗೆ ಕಸ ಮತ್ತು ಸೊಳ್ಳೆಗಳ ಸಮಸ್ಯೆ ಅತಿಯಾಗಿತ್ತು. ಕಾಂಪೌಂಡ್ ಗೋಡೆಯ ಒಳಗಡೆ ಜನ ಕಸ ಎಸೆಯುತ್ತಿದ್ದರು. ಸೊಳ್ಳೆಗಳ ಕಾಟದಿಂದ ರಾತ್ರಿ ಎಲ್ಲಾ ನಿದ್ದೆ ಮಾಡಲು ಸಾಧ್ಯವಾಗಿಲ್ಲ, ಬೆಳಗ್ಗೆ ಅದನ್ನು ಸ್ವಚ್ಚಗೊಳಿಸಲಾಯಿತು ಎಂದು ಚುನಾವಣಾ ಸಿಬ್ಬಂದಿಯೊಬ್ಬರು ತಮ್ಮ ಅನುಭವ ಹಂಚಿಕೊಂಡಿದ್ದಾರೆ.
SCROLL FOR NEXT