ರಾಜ್ಯ

ಹೆಚ್'ಡಿ. ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕಾರ ಹಿನ್ನಲೆ, ಸಂಚಾರದಲ್ಲಿ ಭಾರೀ ಬದಲಾವಣೆ

Manjula VN
ಬೆಂಗಳೂರು; ವಿಧಾನಸೌಧ ಮುಂಭಾಗ ಸಂಜೆ 4.30ಕ್ಕೆ ರಾಜ್ಯದ ನೂತನ ಮುಖ್ಯಮಂತ್ರಿಗಳ ಪ್ರಮಾಣವಚನ ಸ್ವೀಕಾರ ಸಮಾರಂಭ ಹಿನ್ನಲೆಯಲ್ಲಿ ನಗರದ ಒಳ ಮತ್ತು ಹೊರ ಭಾಗದ ಬಹುತೇಕ ರಸ್ತೆಗಳಲ್ಲಿ ಬುಧವಾರ ಸಂಚಾರದಟ್ಟಣೆ ಎದುರಾಗುವ ಸಂಭವಗಳಿವೆ. 
ಸಂಚಾರ ದಟ್ಟಣೆ ಹಿನ್ನಲೆಯಲ್ಲಿ ನಾಗರೀಕರು ಎಚ್ಚರಿಕೆವಹಿಸಬೇಕಿದ್ದು, ಸಂಜೆ 4ರ ಬಳಿಕ ಮುಖ್ಯ ರಸ್ತೆಗಳ ಬದಲಿಗೆ ಪರ್ಯಾಯ ಮಾರ್ಗದಲ್ಲಿ ಸಂಚರಿಸುವಂತೆ ನಗರ ಪೊಲೀಸರು ಮನವಿ ಮಾಡಿಕೊಂಡಿದ್ದಾರೆ. 
ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಕೋಲಾರ, ಮೈಸೂರು, ರಾಮನಗರ ಹಾಗೂ ತುಮಕೂರು ಭಾಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ನಗರಕ್ಕೆ ಆಗಮಿಸುತ್ತಿದ್ದು, ಹೀಗಾಗಿ ರಾಜಧಾನಿ ಸೇರುವ ಪ್ರಮುಖ ಹೆದ್ದಾರಿಗಳಾದ ಬಳ್ಳಾರಿ ರಸ್ತೆ, ಮೈಸೂರು ರಸ್ತೆ, ತುಮಕೂರು ರಸ್ತೆ ಹಾಗೂ ಕನಕಪುರ ರಸ್ತೆಗಳಲ್ಲಿ ಭಾರೀ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆಗಳಿವೆ ಎಂದು ಪೊಲೀಸರು ಹೇಳಿದ್ದಾರೆ. 
ಸಮಾರಂಭಕ್ಕೆ ರಾಜ್ಯದ ವಿವಿಧೆಡೆಯಿಂದ ಸುಮಾರು 2,500 ವಾಹನಗಳಲ್ಲಿ ಜನರು ಆಗಮಿಸುವ ಬಗ್ಗೆ ಮಾಹಿತಿ ಇದೆ. ಇದರಿಂದ ನಗರ ವ್ಯಾಪ್ತಿ ಸಂಚಾರ ಸಮಸ್ಯೆ ಉಂಟಾಗದಂತೆ ಮುಂಜಾಗ್ರತೆ ವಹಿಸಲಾಗಿದ್ದು, ಸಂಚಾರ ನಿರ್ವಹಣೆಗೆ 3,500 ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ. 
ಎಲ್ಲೆಲ್ಲಿ ಮಾರ್ಗ ಬದಲಾವಣೆ? 
ಡಾ.ಅಂಬೇಡ್ಕರ್ ರಸ್ತೆಯಲ್ಲಿ ಪೊಲೀಸ್ ತಿಮ್ಮಯ್ಯ ವೃತ್ತದಿಂದ ಗೋಪಾಲಗೊಡ ವೃತ್ತದವರೆಗೆ ವಾಹನಗಳ ಸಂಚಾರ ಹಾಗೂ ನಿಲುಗಡೆಗಳನ್ನು ನಿಷೇಧಿಸಲಾಗಿದೆ. 
ಶೇಷಾದ್ರಿ ಮತ್ತು ಹಳೆ ಅಂಚೆ ಕಚೇರಿ ರಸ್ತೆ ಕಡೆಯಿಂದ ಬಂದು ಅಂಬೇಡ್ಕರ್ ರಸ್ತೆಯಲ್ಲಿ ಸಂಚರಿಸುವ ಬಸ್ ಗಳನ್ನು ಕೆ.ಆರ್.ವೃತ್ತದಲ್ಲೇ ತಡೆಹಿಡಿಯಲಾಗುವುದು. ಆ ವಾಹನಗಳು ನೃಪತುಂಗ ರಸ್ತೆ ಮುಖಾಂತರ ಸಾಗಬೇಕಾಗಿದೆ. 
ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ, ಚನ್ನಪಟ್ಟಣ ಕಡೆಯಿಂದ ಬರುವ ಬಸ್ ಗಳು, ಮೈಸೂರು ರಸ್ತೆ ಮೇಲ್ಸೇತುವೆ-ಎಸ್'ಜೆಪಿ ಪಸ್ತೆ, ಪುರಭವನ, ಎನ್.ಆರ್.ಜಂಕ್ಷನ್, ಹಡ್ಸನ್ ವೃತ್ತ ಮಾರ್ಗವಾಗಿ ಕಸ್ತೂರಬಾ ರಸ್ತೆಗೆ ಬಂದು ಜನರನ್ನು ಇಳಿಸಬೇಕು. 
ಇನ್ನು ಕನಕಪುರ ರಸ್ತೆ ಕಡೆಯಿಂದ ಬರುವವರು ಬನಶಂಕರಿ ದೇವಸ್ಥಾನ ಬಸ್ ನಿಲ್ದಾಣ-ರಾಜಲಕ್ಷ್ಮಿ ಜಂಕ್ಷನ್-ಜಯನಗರ 4ನೇ ಮುಖ್ಯರಸ್ತೆ-ಸೌತ್ಎಂಡ್ ವೃತ್ತ, ಆರ್.ವಿ.ಜಂಕ್ಷನ್, ಲಾಲ್ ಬಾಗ್ ಪಶ್ಚಿಮ ದ್ವಾರ, ಮಿನರ್ವ ವ-ತ್ತ, ಜೆ.ಸಿ.ರಸ್ತೆ, ಪುರಭವನ, ಹಡ್ಸನ್ ವೃತ್ತ ಮಾರ್ಗವಾಗಿ ಕಸ್ತೂರಬಾ ರಸ್ತೆಗೆ ಬಂದು ಜನರನ್ನು ಇಳಿಸಬೇಕಾಗುತ್ತದೆ. 
ಪಾರ್ಕಿಂಗ್ ಸ್ಥಳಗಳು ಇಂತಿವೆ...
ಕಂಠೀರವ ಕ್ರೀಡಾಂಗಣ, ಮಲ್ಯ ಆಸ್ಪತ್ರೆ ರಸ್ತೆಯ ಸೇಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್ ಮೈದಾನ, ಯುಬಿ ಸಿಟಿ ಪಾರ್ಕಿಂಗ್ ಪ್ರದೇಶ, ಸೆಂಟ್ರಲ್ ಕಾಲೇಜು ಮೈದಾನ, ಸ್ವಾತಂತ್ರ್ಯ ಉದ್ಯಾನವನ, ಟಿ.ಚೌಡಯ್ಯ ರಸ್ತೆಯಲ್ಲಿ ಎಲ್ಆರ್'ಡಿಇ ಜಂಕ್ಷನ್ ನಿಂದ ರಾಜಭವನ ಜಂಕ್ಷನ್ ವರೆಗೆ, ಹಳೇ ಅಂಚೆ ಕಚೇರಿ ರಸ್ತೆಯ ಸರ್ಕಾರಿ ಕಲಾ ಕಾಲೇಜು.
SCROLL FOR NEXT