ಬೆಂಗಳೂರು: ಆ್ಯಂಬಿಡೆಂಟ್ ವಂಚನೆ ಪ್ರಕರಣದಲ್ಲಿ ಕಂಪನಿ ಜೊತೆಗೆ ಮಾಜಿ ಸಚಿವ ಜನಾರ್ಧನ ರೆಡ್ಡಿಯವರು ಕೋಟ್ಯಾಂತರ ರುಪಾಯಿ ವಹಿವಾಯು ನಡೆಸಿದ್ದಾರೆಂದು ಸಿಸಿಬಿ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ಹೆಸರು ಬಳಸಿ ಜನಾರ್ಧನ ರೆಡ್ಡಿ ರೂ.20 ಕೋಟಿ ಲಪಟಾಯಿಸಿ ವಂಚನೆ ಮಾಡಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದ್ದೆ ಹಿನ್ನಲೆಯಲ್ಲಿ ಕಾನೂನಾತ್ಮಕವಾಗಿ ಅವರನ್ನು ಬಂಧನಕ್ಕೊಳಪಡಿಸಲಾಗಿದೆ ಎಂದು ಸಿಸಿಬಿ ಅಪರಾಧ ವಿಭಾಗದ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಅವರು ಹೇಳಿದ್ದಾರೆ.
ಜನಾರ್ಧನ ರೆಡ್ಡಿ ಬಂಧನದ ಬಗ್ಗೆ ಖಚಿತಪಡಿಸಿ ಭಾನುವಾರ ಮಧ್ಯಹ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶನಿವಾರ ತಡರಾತ್ರಿ ವರೆಗೂ ಹಲವು ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ. ಸೂಕ್ತ ಸಾಕ್ಷ್ಯಾಧಾರ ಹಾಗೂ ಸಾಕ್ಷಿಗಳ ಹೇಳಿಕೆ ಆಧಾರದ ಮೇಲೆ ಕಾನೂನಾತ್ಮಕವಾಗಿಯೇ ಬಂಧಿಸಲಾಗಿದೆ. ವಂಚನೆ ಆಗಿರುವ ಹಣವನ್ನು ಪತ್ತೆ ಹಚ್ಚಿ ಜಪ್ತಿ ಮಾಡಲಾಗುವುದು. ಬಳಿಕ ನ್ಯಾಯಾಲಯದ ಅನುಮತಿ ಪಡೆದು ಆ್ಯಂಬಿಡೆಂಟ್ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದ್ದ ಸಾರ್ವಜನಿಕರಿಗೆ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಸಯ್ಯದ್ ಫರೀದ್ ಅಹ್ಮದ್ ಅವರಿಗೆ ಆರ್ಥಿಕವಾಗಿ ಈ ಹಿಂದೆ ಸಹಾಯ ಮಾಡಿದ್ದೆ. ಆ ಹಣವನ್ನು ಆತ ಹಿಂತಿರುಗಿಸಿದ್ದ ಎಂದು ರೆಡ್ಡಿ ಹೇಳುತ್ತಿದ್ದಾರೆ. ಪ್ರಕರಣದಲ್ಲಿ ತಾನು ಮುಗ್ಧನೆಂದೂ ಹೇಳುತ್ತಿದ್ದಾರೆ. ಇಡಿ ಪ್ರಕರಣದಲ್ಲಿ ನಾನು ಅಹ್ಮದ್ ಗೆ ಸಹಾಯ ಮಾಡಿಲ್ಲ ಎನ್ನುತ್ತಿದ್ದಾರೆ. ಆದರೆ, ಕಂಪನಿಯೊಂದಿಗೆ ರೆಡ್ಡಿ ಕೋಟ್ಯಾಂತರ ಹಣದ ವ್ಯವಹಾರ ನಡೆಸಿರುವುದರ ಬಗ್ಗೆ ಅವರಿಗೆ ನಾವು ದಾಖಲೆಗಳನ್ನು ತೋರಿಸಿದ್ದೇವೆ. ಇದಕ್ಕೆ ಅವರು ಯಾವುದೇ ರೀತಿಯ ಉತ್ತರಗಳನ್ನು ನೀಡಿಲ್ಲ. ದಾಖಲೆ ಹಾಗೂ ಸಾಕ್ಷ್ಯಗಳನ್ನು ಪರಿಶೀಲನೆ ನಡೆಸಿದರೆ, ಇಡಿ ಪ್ರಕರಣದಲ್ಲಿ ಹಣದ ಸಹಾಯವಷ್ಟೇ ಅಲ್ಲದೆ, ಹಗರಣದಲ್ಲಿ ಭಾಗಿಯಾಗಿರುವುದೂ ಕೂಡ ಕಂಡು ಬಂದಿದೆ. ಎಲ್ಲಾ ರೀತಿಯ ಆಯಾಮದಲ್ಲಿಯೂ ಪ್ರಸ್ತುತ ತನಿಖೆ ನಡೆಸಲಾಗುತ್ತಿದೆ ಎಂದು ಸಿಸಿಬಿ ಅಧಿಕಾರಿಗಳು ಹೇಳಿದ್ದಾರೆ.
ರೆಡ್ಡಿಯವರಿಗೆ ನೀಡಲಾಗಿದ್ದ ಚಿನ್ನವನ್ನು ಅಲಿಖಾನ್ ಸಂಪೂರ್ಣವಾಗಿ ಬಳಕೆ ಮಾಡಿರುವುದಕ್ಕೆ ನಮ್ಮ ಬಳಿ ಸಾಕ್ಷ್ಯಾಧಾರಗಳಿವೆ. ಈ ಬಗ್ಗೆ ನ್ಯಾಯಾಲಯಕ್ಕೂ ಮಾಹಿತಿ ನೀಡಲಾಗಿದೆ. ಹೀಗಾಗಿ ಆತನನ್ನು ನ್ಯಾಯಾಲಯ ವಶಕ್ಕೆ ನೀಡಿದೆ ಎಂದು ಮತ್ತೊಬ್ಬ ಅಧಿಕಾರಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics