ಬೆಂಗಳೂರು: ನಕಲಿ ಜಿಎಸ್ ಟಿ ಸರಕುಪಟ್ಟಿ ತೋರಿಸಿ ಸರ್ಕಾರಕ್ಕೆ ಸುಮಾರು 200 ಕೋಟಿ ರೂಪಾಯಿ ವಂಚಿಸಿದ ಮೂವರನ್ನು ಬಂಧಿಸಲಾಗಿದೆ. ಸುಮಾರು ಎರಡು ತಿಂಗಳು ನಡೆಸಿದ ತನಿಖೆಯ ಬಳಿಕ ಬಂಧಿಸಲಾಗಿದೆ.
ಆರೋಪಿಗಳನ್ನು ಸುಹೈಲ್, ಮೊಹಮ್ಮದ್ ಬಾಷಾ ಮತ್ತು ಹಫಿಜ್ ಎಂದು ಗುರುತಿಸಲಾಗಿದೆ. ಇವರು ಸುಮಾರು 1,200 ಕೋಟಿ ರೂಪಾಯಿ ಮೊತ್ತದ ತೆರಿಗೆ ದರಪಟ್ಟಿ ತಯಾರಿಸಿ ಹೊರಡಿಸಿದ್ದರು ಎಂದು ಹೇಳಲಾಗಿದೆ. ಇವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಜಿಎಸ್ ಟಿ ಕಮಿಷನರ್ ಉಪಯೋಗಿಸುವ ಹಲವು ದತ್ತಾಂಶ ವಿವರಣೆ ತಂತ್ರಜ್ಞಾನಗಳನ್ನು ಉಪಯೋಗಿಸಿ ವಂಚನೆಯನ್ನು ಪತ್ತೆಹಚ್ಚಲಾಗಿದೆ ಎಂದು ಬೆಂಗಳೂರು ದಕ್ಷಿಣ ವಿಭಾಗದ ಕೇಂದ್ರ ಜಿಎಸ್ ಟಿ ಆಯುಕ್ತ ಜಿ ನಾರಾಯಣಸ್ವಾಮಿ ತಿಳಿಸಿದ್ದಾರೆ. ಆರಂಭದಲ್ಲಿ ಮೂವರನ್ನು ಬಂಧಿಸಿದರೂ ಕೂಡ ಈ ವಂಚನೆಯಲ್ಲಿ ಹಲವರು ಭಾಗಿಯಾಗಿರುವ ಶಂಕೆಯಿದೆ. ಕಬ್ಬಿಣ ಮತ್ತು ಸ್ಟೀಲ್ ಉದ್ಯಮದಲ್ಲಿ ಇಂತಹ ಬೃಹತ್ ಮೊತ್ತದ ವಂಚನೆ ನಡೆಯುತ್ತಿದ್ದು ಇದುವರೆಗೆ ನಡೆದ ಅತಿದೊಡ್ಡ ವಂಚನೆ ಇದಾಗಿದೆ ಎನ್ನುತ್ತಾರೆ ಅವರು.
ವಂಚನೆಗೆ ಬಳಸಿದ ವಿಧಾನ: ನಕಲಿ ವಿಳಾಸಗಳ ಮೂಲಕ ನಕಲಿ ಕಂಪೆನಿಗಳನ್ನು ಸೃಷ್ಟಿಸಿ ಹಲವು ಜಿಎಸ್ ಟಿ ದಾಖಲಾತಿಗಳನ್ನು ಆರೋಪಿಗಳು ಮಾಡಿದ್ದಾರೆ. ಆರೋಪಿಗಳು ನಂತರ ನಕಲಿ ಜಿಎಸ್ ಟಿ ದರಪಟ್ಟಿಗಳನ್ನು ಹೊರಡಿಸುತ್ತಿದ್ದರು ಮತ್ತು ಯಾವುದೇ ಸರಕು ಸಾಮಾನುಗಳನ್ನು ಪೂರೈಸದೆ ನಕಲಿ ವಾಹನ ದಾಖಲಾತಿ ವಿವರಗಳನ್ನು ನಾಡಿ ಇ-ವೇ ದರಗಳನ್ನು ಸೃಷ್ಟಿ ಮಾಡುತ್ತಿದ್ದರು. ಬಾಷಾ ತನ್ನ ಮನೆಯವರು ಮತ್ತು ಸ್ನೇಹಿತರ ಹೆಸರಿನಲ್ಲಿ 14 ಜಿಎಸ್ ಟಿ ದಾಖಲಾತಿಗಳನ್ನು ಪಡೆದುಕೊಂಡಿದ್ದರೆ ಸುಹೈಲ್ 6 ಜಿಎಸ್ ಟಿ ದಾಖಲಾತಿಗಳನ್ನು ನಕಲಿ ದರಪಟ್ಟಿಗಳನ್ನು ತಯಾರಿಸಲು ಬಳಸಿಕೊಂಡಿದ್ದ.
ಅಧಿಕಾರಿಗಳಿಗೆ ಸಂಶಯ ಬಂದು ಕಳೆದ ಎರಡು ತಿಂಗಳಿನಿಂದ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದರು. ತನಿಖೆಯ ಪ್ರಗತಿಯಲ್ಲಿ ಇನ್ನಷ್ಟು ಮಾಹಿತಿಗಳು ಮತ್ತು ಆರೋಪಿಗಳು ಪತ್ತೆಯಾಗುವ ಸಾಧ್ಯತೆಯಿದೆ ಎಂದು ನಾರಾಯಣಸ್ವಾಮಿ ತಿಳಿಸಿದ್ದಾರೆ.