ರಾಜ್ಯ

ಮೈಸೂರು ಕೋರ್ಟ್ ಆವರಣದಲ್ಲಿ ಸ್ಫೋಟ ಪ್ರಕರಣ: ಆರೋಪಿಗಳ ಮನವಿ ತಿರಸ್ಕರಿಸಿದ ನ್ಯಾಯಾಲಯ

Sumana Upadhyaya

ಬೆಂಗಳೂರು: ಮೈಸೂರಿನ ನ್ಯಾಯಾಲಯ ಆವರಣದಲ್ಲಿ ಬಾಂಬ್ ಸ್ಫೋಟಗೊಂಡ ಪ್ರಕರಣಕ್ಕೆ ಸಂಬಂಧಪಟ್ಟಂತೆ ತಮಿಳುನಾಡಿನ ಶಂಕಿತ ಭಯೋತ್ಪಾದಕ ಸಲ್ಲಿಸಿದ್ದ ಮನವಿಯನ್ನು ಇಲ್ಲಿನ ರಾಷ್ಟ್ರೀಯ ತನಿಖಾ ದಳದ ವಿಶೇಷ ನ್ಯಾಯಾಲಯ ತಳ್ಳಿ ಹಾಕಿದೆ.

ನ್ಯಾಯಾಲಯಕ್ಕೆ ಬೆಂಗಾವಲಿನ ಜೊತೆ ಕರೆದುಕೊಂಡು ಹೋಗುವಾಗ ಜೈಲು ಅಧಿಕಾರಿಗಲು ಕೈ ಕೋಳ ತೊಡಿಸದಂತೆ ಮತ್ತು ಕುಟುಂಬದವರನ್ನು ಸಂಪರ್ಕಿಸಲು ಕೇಂದ್ರ ಕಾರಾಗೃಹದಲ್ಲಿ ಫೋನ್ ಸೌಲಭ್ಯ ನೀಡುವಂತೆ ಜೈಲಿನ ಅಧಿಕಾರಿಗಳಿಗೆ ಆದೇಶ ನೀಡಬೇಕೆಂದು ಆರೋಪಿ ಮನವಿ ಸಲ್ಲಿಸಿದ್ದ.

ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಿದ್ದಲಿಂಗ ಪ್ರಭು ನಿನ್ನೆ ನೈನಾರ್ ಅಬ್ಬಾಸ್ ಆಲಿ, ಸಮ್ಸನ್ ಕರಿಮ್ ರಾಜಾ ಮತ್ತು ದಾವೂದ್ ಸುಲೈಮಾನ್ ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿದರು. ಅಕ್ರಮ ಚಟುವಟಿಕೆ(ತಡೆ) ಕಾಯ್ದೆಯಡಿ ಸಾರ್ವಜನಿಕರ ಹಿತಾಸಕ್ತಿ ಮತ್ತು ರಕ್ಷಣೆ ಮುಖ್ಯವಾದದ್ದು ಹೀಗಾಗಿ ಫೋನ್ ಸೌಲಭ್ಯ ಮತ್ತು ಕೈಕೋಳ ತೊಡಿಸುವ ಕುರಿತು ಯಾವುದೇ ನಿರ್ಧಾರವನ್ನು ಈಗ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಾಧೀಶರು ಹೇಳಿದ್ದಾರೆ.

ರಾಷ್ಟ್ರೀಯ ತನಿಖಾ ದಳ ಸ್ಥಳೀಯ ಪೊಲೀಸರ ನೆರವಿನಿಂದ ಮದುರೈ ಮತ್ತು ಚೆನ್ನೈಯಲ್ಲಿ ಆಲಿ, ರಾಜಾ ಮತ್ತು ಸುಲೈಮಾನ್ ನನ್ನು ಬಂಧಿಸಿದ್ದರು. 2016ರ ಆಗಸ್ಟ್ 1ರಂದು ಮೈಸೂರಿನ ಕೋರ್ಟ್ ಆವರಣದ ಸಾರ್ವಜನಿಕ ಶೌಚಾಲಯದಲ್ಲಿ ಬಾಂಬ್ ಸ್ಪೋಟಕ್ಕೆ ಸಂಬಂಧಪಟ್ಟಂತೆ ಅಕ್ರಮ ಚಟುವಟಿಕೆ (ತಡೆ) ಕಾಯ್ದೆಯಡಿ ಆರೋಪಿಗಳು ಬಂಧಿತರಾಗಿದ್ದರು. ಆರೋಪಿಗಳು ಭಯೋತ್ಪಾದಕ ಸಂಘಟನೆ ದ ಬೇಸ್ ಮೂವ್ ಮೆಂಟ್ ನಡೆಸುತ್ತಿದ್ದಾರೆ.

SCROLL FOR NEXT