ಮಂಡ್ಯ: ಬಸ್ ಅಪಘಾತ ದುರಂತದ ಸುದ್ದಿ ತಿಳಿಯುತ್ತಿದ್ದಂತೆಯೇ ಮಂಡ್ಯ, ಪಾಂಡವಪುರ, ಶ್ರೀರಂಗಪಟ್ಟಣ ಸೇರಿ ಸುತ್ತಮುತ್ತಲ ಹಲವು ಗ್ರಾಮಗಳಿಂದ ಸಾಗರೋಪಾದಿಯಲ್ಲಿ ಜನರು ಘಟನಾ ಸ್ಥಳಕ್ಕೆ ಧಾವಿಸಿದ್ದರು.
ಸುಮಾರು 20 ಸಾವಿರಕ್ಕು ಹೆಚ್ಚು ಜನರು ಸ್ಥಳಕ್ಕೆ ದೌಡಾಯಿಸಿದ್ದರಿಂದಾಗಿ ಕಾರ್ಯಾಚರಣೆ ವೇಳೆ ಜನರನ್ನು ನಿಯಂತ್ರಿಸುವುದು ಪೊಲೀಸರಿಗೆ ಹರಸಾಹಸವಾಗಿತ್ತು.
ಸ್ಥಳಕ್ಕೆ ಬಂದವರೆವಲ್ಲರೂ ದುರಂತದಲ್ಲಿ ತಮ್ಮವರೇನಾದರೂ ಇದ್ದಾರಾ ಎಂದು ಆತಂಕದಿಂದ ಹುಡುಕಾಡುತ್ತಿದ್ದರು. ಈ ದೃಶ್ಯ ಎಲ್ಲರ ಮನಕಲಕುವಂತಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಜನರು ಸ್ಥಳಕ್ಕೆ ದೌಡಾಯಿಸಿದ್ದರಿಂದಾಗಿ ರಕ್ಷಣಾ ಕಾರ್ಯಕ್ಕೂ ಕೆಲ ಕಾಲ ಅಡ್ಡಿಯುಂಟಾಗಿತ್ತು.
ಬಸ್ ಮೇಲೆತ್ತಲು ಕ್ರೇನ್ ನ್ನು ಸ್ಥಳಕ್ಕೆ ಕರೆಸಲಾಗಿತ್ತು. ಈ ವೇಳೆ ಕ್ರೇನೇ ಒಂದೂವರೆ ಕಿ.ಮೀ ದೂರದಿಂದ ಸ್ತಳಕ್ಕೆ ಬರಬೇಕಾದರೆ ಒಂದೂವರೆ ಗಂಟೆ ತೆಗೆದುಕೊಳ್ಳಬೇಕಾಯಿತು. ಅಲ್ಲದೆ, ಸುಮಾರು ಎರಡು ಕಿ.ಮೀ ದೂರದವರೆಗೂ ವಾಹನಗಳನ್ನು ನಿಲ್ಲಿಸಲಾಗಿತ್ತು.
ಸ್ಥಳದಲ್ಲಿದ್ದ ಗ್ರಾಮಸ್ಥರು ಗ್ರಾಮಕ್ಕೆ ಕೆಎಸ್ಆರ್'ಟಿಸಿ ಬಸ್ ಗಳನ್ನು ನಿಯೋಜಿಸದ ಹಿನ್ನಲೆಯಲ್ಲಿ ರಾಜಕೀಯ ನಾಯಕರು ಹಾಗೂ ಅಧಿಕಾರಿಗಳ ವಿರುದ್ಧ ತೀವ್ರವಾಗಿ ಕಿಡಿಕಾರಲು ಆರಂಭಿಸಿದ್ದರು.
ಸ್ಥಳದಲ್ಲಿ ಕನಿಷ್ಟವೆಂದರೂ 4,000 ಬೈಕ್ ಗಳು, ನೂರಾರು ಕಾರು ಹಾಗೂ ಗೂಡ್ಸ್ ವಾಹನಗಳಲ್ಲಿ ಜನರು ಘಟನಾ ಸ್ಥಳಕ್ಕೆ ಆಗಮಿಸಿದ್ದರು. ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾವಣೆ ಗೊಂಡಿದ್ದರಿಂದಾಗಿ ಪೊಲೀಸರು ಕರಗನಮರಡಿ ಮಾರ್ಗದಿಂದ ಬರುತ್ತಿದ್ದ ವಾಹನಗಳ ಮಾರ್ಗಗಳನ್ನು ಬದಲಿಸಿದರು.
ಇನ್ನು ಘಟನಾ ಸ್ಥಳಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಮಿಸುತ್ತಿದ್ದ ವೇಳೆಯಂತೂ ಅಧಿಕಾರಿಗಳಿಗೆ ದಾರಿ ಮಾಡಿಕೊಡಲು ಪೊಲೀಸರು ಹರಸಾಹಸ ಪಡುವಂತಾಗಿದ್ದು, ಮುಖ್ಯಮಂತ್ರಿಗಳು ಪರಿಹಾರ ಘೋಷಣೆ ಮಾಡಿದ ಬಳಿಕ ಹಲವು ಗ್ರಾಮಸ್ಥರು ಸ್ಥಳದಿಂದ ಕಾಲ್ತೆಗೆದರು.
ಘಟನೆ ಬಳಿಕ ಜಿಲ್ಲಾ ಸಚಿವ ಸಿ.ಎಸ್. ಪುಟ್ಟರಾಜು ಅವರು ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆಗಳನ್ನು ನೋಡಿಕೊಂಡರು. ಅಲ್ಲದೆ, ಮೃತರ ಕುಟುಂಬಸ್ಥರಿಗೆ ಮೃತದೇಹಗಳು ಸೂಕ್ತ ರೀತಿಯಲ್ಲಿ ತಲುಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಘಟನೆ ಕುರಿತಂತೆ ಪ್ರತಿಕ್ರಿಯೆ ನೀಡಿದ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅವರು, ತನಿಖೆಗೆ ಆದೇಶಿಸಿದ್ದಾರೆ.
ಆದಾಯ ಇಲ್ಲ ಎಂದು ಹೇಳಿ ಈ ಹಿಂದೆ ಸರ್ಕಾರ ಗ್ರಾಮಕ್ಕೆ ನೀಡಿದ್ದ ಕೆಎಸ್ಆರ್'ಟಿಸಿ ಬಸ್ ಗಳ ವ್ಯವಸ್ಥೆಯನ್ನು ಹಿಂದಕ್ಕೆ ತೆಗೆದುಕೊಂಡಿದ್ದರು. ಜನರ ಸುರಕ್ಷತೆ ಬಗ್ಗೆ ಆಲೋಚಿಸದ ಸರ್ಕಾರ ಆದಾಯದ ಬಗ್ಗೆ ಏಕೆ ಚಿಂತನೆ ನಡೆಸಬೇಕೆಂದು ಸ್ಥಳೀಯ ನಿವಾರಿ ರಾಜೇ ಗೌಡ ಅವರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics