ಬೆಂಗಳೂರು: ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ವಾಹನಗಳಲ್ಲಿ ಜಾಹೀರಾತುಗಳ ಪ್ರದರ್ಶನಕ್ಕೆ ಬಳಸಬಾರದು ಎಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಹೇಳಿದೆ. ಅವುಗಳಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬಸ್ಸುಗಳು ಕೂಡ ಸೇರಿವೆ.
ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಮತ್ತು ನ್ಯಾಯಮೂರ್ತಿ ಆರ್ ದೇವದಾಸ್ ಅವರನ್ನೊಳಗೊಂಡ ವಿಭಾಗೀಯ ಪೀಠ ರಾಜ್ಯ ಸರ್ಕಾರಕ್ಕೆ ಆದೇಶ ನೀಡಿ ನಿಷೇಧಿತ ಪ್ಲಾಸ್ಟಿಕ್, ಫ್ಲೆಕ್ಸ್ ಗಳನ್ನು ವಾಹನಗಳಲ್ಲಿ ಜಾಹೀರಾತುಗಳಲ್ಲಿ ಪ್ರದರ್ಶಿಸಬಾರದು ಎಂದು ಹೇಳಿದೆ. ನಗರದಲ್ಲಿ ಅನಧಿಕೃತ ಬ್ಯಾನರ್, ಹೋರ್ಡಿಂಗ್ ಗಳನ್ನು ನಿಷೇಧಿಸಬೇಕೆಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸಿದ್ದರು.
ವಾಹನಗಳಲ್ಲಿ ಜಾಹೀರಾತು ಪ್ರದರ್ಶನಕ್ಕೆ ಪ್ಲಾಸ್ಟಿಕ್ ಗಳನ್ನು ಬಳಸದಂತೆ ತಳಮಟ್ಟದ ರಚನಾತ್ಮಕ ಕ್ರಮ ತೆಗೆದುಕೊಳ್ಳಬೇಕೆಂದು ಪೊಲೀಸ್ ಇಲಾಖೆ ಮತ್ತು ಸಾರಿಗೆ ಇಲಾಖೆಗೆ ಸೂಚಿಸಲು ಅಡ್ವೊಕೇಟ್ ಜನರಲ್ ಗೆ ನ್ಯಾಯಾಲಯ ಸೂಚಿಸಿದೆ. ಅದನ್ನು ಸಾರ್ವಜನಿಕ ಮತ್ತು ಖಾಸಗಿ ಸಹಯೋಗದ ಯೋಜನೆಯಡಿ, ಸಾರ್ವಜನಿಕ ಶೌಚಾಲಯ, ಸ್ಕೈವಾಕ್, ಬಸ್ ನಿಲ್ದಾಣಗಳಲ್ಲಿ ಕೂಡ ಪ್ರದರ್ಶಿಸಬಾರದು ಎಂದು ಹೇಳಿದೆ.
ಈ ಮಧ್ಯೆ, ಬಿಬಿಎಂಪಿ ಪರ ವಕೀಲ ನ್ಯಾಯಾಲಯಕ್ಕೆ ಹೇಳಿಕೆ ನೀಡಿ, ಉದ್ದೇಶಿತ ಬಿಬಿಎಂಪಿ ಹೊರಾಂಗಣ ಸಹಿ ಬೋರ್ಡುಗಳು ಮತ್ತು ಸಾರ್ವಜನಿಕ ಸಂದೇಶಗಳ ಬೈ ಲಾ-2018ರಡಿ 704 ಆಕ್ಷೇಪ/ಸಲಹೆಗಳನ್ನು ಸ್ವೀಕರಿಸಲಾಗಿದೆ. ಅವುಗಳಲ್ಲಿ 75 ಆಕ್ಷೇಪಗಳನ್ನು ಇ ಮೇಲ್, 72 ಆಕ್ಷೇಪಗಳನ್ನು ಅಂಚೆ ಮೂಲಕ ಮತ್ತು 557 ಆಕ್ಷೇಪಗಳನ್ನು ಬಿಬಿಎಂಪಿ ಕಚೇರಿಯಲ್ಲಿ ಸ್ವೀಕರಿಸಲಾಗಿದೆ. ಇದಕ್ಕೆ ಈ ಪ್ರಕ್ರಿಯೆಯನ್ನು ವಿಳಂಬ ಮಾಡದೆ ಬೈ-ಲಾ ನಿಯಮಗಳನ್ನು ಅಂತಿಮಗೊಳಿಸಬೇಕೆಂದು ಹೈಕೋರ್ಟ್ ಬಿಬಿಎಂಪಿಗೆ ಹೇಳಿದೆ.
ಅರ್ಜಿ ವಿಚಾರಣೆಯನ್ನು ನ್ಯಾಯಾಲಯ ನವೆಂಬರ್ 3ಕ್ಕೆ ಮುಂದೂಡಿದೆ. ಆ ದಿವ ವಿಶೇಷ ವಿಚಾರಣೆ ನಡೆಯಲಿದೆ.