ರಾಜ್ಯ

ಸುಬ್ರಹ್ಮಣ್ಯ ಕ್ಷೇತ್ರದ ಕುಮಾರಧಾರಾ ನದಿ ತೀರದಲ್ಲಿ ಮದ್ಯದ ಬಾಟಲಿಗಳು!

Sumana Upadhyaya
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಖ್ಯಾತ ಧಾರ್ಮಿಕ ಕೇಂದ್ರ ಕುಕ್ಕೆ ಸುಬ್ರಹ್ಮಣ್ಯದ ನಿರ್ಲಕ್ಷ್ಯಕ್ಕೊಳಗಾಗಿರುವ ಸ್ನಾನಘಟ್ಟದ ಸುತ್ತಮುತ್ತ ಕಾರ್ಯಕರ್ತರು ಸ್ವಚ್ಛತಾ ಕಾರ್ಯ ನಡೆಸಿದರು.
ಕಳೆದ ಶನಿವಾರ ಮತ್ತು ಭಾನುವಾರ ಎರಡು ದಿನಗಳ ಕಾಲ ಸ್ಥಳೀಯ ಕಾರ್ಯಕರ್ತರು ಸುಬ್ರಹ್ಮಣ್ಯದ ಕುಮಾರಧಾರಾ ನದಿಯ ದಡದಲ್ಲಿ ಸ್ವಚ್ಛತಾ ಕಾರ್ಯ ನಡೆಸಿದ್ದು ಇದು ತೆರೆದ ಚರಂಡಿಯಾಗಿತ್ತು.
ಕುಮಾರಧಾರ ನದಿ ತೀರದಲ್ಲಿ ಸುಮಾರು 10 ಸಾವಿರ ಪ್ಲಾಸ್ಟಿಕ್ ಬಾಟಲ್ ಗಳು ಮತ್ತು ಗ್ಲಾಸ್ ಬಾಟಲ್ ಗಳು ಕಾರ್ಯಕರ್ತರಿಗೆ ಸ್ವಚ್ಛ ಮಾಡುವಾಗ ದೊರಕಿದ್ದು ಅವುಗಳಲ್ಲಿ ಸುಮಾರು 3 ಸಾವಿರ ಮದ್ಯದ ಬಾಟಲ್ ಗಳು ಕೂಡ ಇದ್ದವು ಎಂಬುದು ಆತಂಕಕಾರಿ ಸಂಗತಿ.
ಕಾರ್ಯಕರ್ತರು ಮದ್ಯದ ಬಾಟಲಿಗಳನ್ನು ರಸ್ತೆ ಬದಿ ಪ್ರದರ್ಶಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸಿದರು.
ಇನ್ನು ಭಕ್ತಾದಿಗಳು ಸ್ನಾನ ಮಾಡುವ ಸ್ನಾನಘಟ್ಟದ ಸ್ಥಿತಿ ಕೂಡ ಇದಕ್ಕಿಂತ ಭಿನ್ನವಾಗಿಲ್ಲ.
ನದಿ ತೀರವನ್ನು ಸ್ವಚ್ಛ ಮಾಡಲು ಸುಮಾರು 20 ಟ್ರಾಕ್ಟರ್ ಗಳನ್ನು ಬಳಸಲಾಗಿತ್ತು. ಎರಡೂವರೆ ಕಿಲೋ ಮೀಟರ್ ನಷ್ಟು ಉದ್ದದವರೆಗೆ ಪ್ರದೇಶಗಳಲ್ಲಿ ಪ್ಲಾಸ್ಟಿಕ್ ಗಳು, ಬಾಟಲ್ ಗಳು ಬಿದ್ದಿದ್ದವು. ಈ ಪ್ರದೇಶ ಇಷ್ಟೊಂದು ಕಲುಷಿತವಾಗಲು ಮುಜರಾಯಿ ಇಲಾಖೆಯ ಮತ್ತು ಸಾರ್ವಜನಿಕರ ದಿವ್ಯ ನಿರ್ಲಕ್ಷ್ಯವೇ ಕಾರಣ ಎಂದು ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದ ಕಾರ್ಯಕರ್ತರು ಆರೋಪಿಸಿದರು.
SCROLL FOR NEXT