ರಾಜ್ಯ

ಪಂಥಾಹ್ವಾನ ಕೊಡಲು ಪೇಜಾವರ ಶ‍್ರೀಗಳು ಯಾರು? ಅವರೇನೂ ಪ್ರಧಾನಿಯೋ ಅಥವಾ ಕಾಂಗ್ರೆಸ್ ಹೈಕಮಾಂಡೋ: ಎಂಬಿ ಪಾಟೀಲ್

Vishwanath S
ವಿಜಯಪುರ: ಉಡುಪಿ ಪೇಜಾವರ ಶ‍್ರೀಗಳು ತಮ್ಮ ಮಠದಲ್ಲಿನ ಹುಳುಕಗಳನ್ನು ಸರಿಪಡಿಸಿಕೊಳ್ಳದೇ ಮತ್ತೊಂದು ಧರ್ಮದಲ್ಲಿ ಕಡ್ಡಿ ಆಡಿಸುವ ಕೆಲಸ ಮಾಡುತ್ತಿರುವುದು ಸರಿಯಲ್ಲ ಎಂದು ಮಾಜಿ ಸಚಿವ, ಕಾಂಗ್ರೆಸ್ ಶಾಸಕ ಎಂ ಬಿ ಪಾಟೀಲ್ ಕಿಡಿಕಾರಿದ್ದಾರೆ.
ಶುಕ್ರವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಂ.ಬಿ.ಪಾಟೀಲ್, ಧರ್ಮದ ಬಗ್ಗೆ ಮಾತನಾಡುವ ಪೇಜಾವರ ಶ‍್ರೀಗಳು ದಲಿತರ ಜೊತೆ ಮೊದಲು ಭೋಜನ ಮಾಡಬೇಕು, ತಮ್ಮ ಮಠಗಳಿಗೆ ದಲಿತ ಮಠಾಧಿಪತಿಯಾಗಲೀ ಅಥವಾ ಲಿಂಗಾಯತ ವ್ಯಕ್ತಿಗಳನ್ನಾಗಲಿ ಮಠಾಧೀಶರನ್ನಾಗಿ ನೇಮಿಸಬೇಕು ಎಂದು ಆಗ್ರಹಿಸಿದರು.
ಧರ್ಮದ ಬಗ್ಗೆ ಚರ್ಚಿಸಲು ತಮಗೆ ಪಂಥಾಹ್ವಾನ ಕೊಡಲು ಪೇಜಾವರ ಶ‍್ರೀಗಳು ಯಾರು? ಅವರು ಕರೆದ ಕಡೆ ಹೋಗಲು ಅವರೇನೂ ದೇಶದ ಪ್ರಧಾನಿಯೋ ಅಥವಾ ಕಾಂಗ್ರೆಸ್ ಪಕ್ಷದ ಹೈಕಮಾಂಡೋ ಎಂದು ಅವರು ಆಕ್ರೋಶವ್ಯಕ್ತಪಡಿಸಿದರು.
ಕೆಲವು ದಿನಗಳ ಹಿಂದೆ ಮೈಸೂರಿನಲ್ಲಿ ಪೇಜಾವರ ಶ‍್ರೀಗಳು, ಶಿವನನ್ನು ಆರಾಧಿಸುವವರೆಲ್ಲರೂ ಹಿಂದೂಗಳೇ. ಲಿಂಗಾಯತ ಪ್ರತ್ಯೇಕ ಧರ್ಮ ಎಂದು ಪ್ರತಿಪಾದಿಸುವ ಎಂ.ಬಿ.ಪಾಟೀಲ್, ಎಸ್‍.ಎಂ.ಜಾಮ್ ಧಾರ್, ಸಾಣೆಹಳ್ಳಿ ಪಂಡಿತಾರಾಧ್ಯ ಸ್ವಾಮೀಜಿ ಸೇರಿದಂತೆ ಧರ್ಮದ ವಿಚಾರದ ಬಗ್ಗೆ ಮಾತನಾಡಲಿ ಎಂದು ಪಂಥಾಹ್ವಾನ ನೀಡಿದ್ದರು.
ಕೆಲವು ದಿನಗಳ ಹಿಂದೆ ಲಿಂಗಾಯತ ಪಂಚಮಸಾಲಿ ಪೀಠದ ಬಸವ ಮೃತ್ಯುಂಜಯ ಸ್ವಾಮೀಜಿ ಕಿಡಿಕಾರಿ, ಪೇಜಾವರ ಶ‍್ರೀಗಳು ಪಂಥಾಹ್ವಾನ ನೀಡುವುದನ್ನು ಬಿಟ್ಟು ಲಿಂಗಾಯತ ಧರ್ಮದ ಬಗ್ಗೆ ಮೊದಲು ತಿಳಿದುಕೊಳ್ಳಲಿ ಎಂದು ಕಿಡಿಕಾರಿದ್ದರು. ಇದೀಗ ಪೇಜಾವರರ ವಿರುದ್ಧ ಎಂ.ಬಿ.ಪಾಟೀಲ್ ಆಕ್ರೋಶ ಹೊರಹಾಕಿದ್ದಾರೆ.
SCROLL FOR NEXT