ಕುಖ್ಯಾತ ಶ್ರೀಗಂಧ ಮರಗಳ್ಳರ ಸೆರೆಗೆ ಸಿನಿಮೀಯ ರೀತಿ ಬೇಟೆ ನಡೆಸಿದ 200 ಪೊಲೀಸರ ಪಡೆ!
ಬೆಂಗಳೂರು: ನಗರದ ಇಬ್ಬರು ಡಿಸಿಪಿಗಳ ನೇತೃತ್ವದ ಶಸ್ತ್ರಸಜ್ಜಿತ 200 ಪೊಲೀಸರ ಬೃಹತ್ ಪಡೆಯು ಶುಕ್ರವಾರ ಮಧ್ಯ ರಾತ್ರಿ ಸಿನಿಮೀಯ ಶೈಲಿಯಲ್ಲಿ ದಾಳಿ ನಡೆಸಿ, ರಾಜಧಾನಿ ಹೊರವಲಯದಲ್ಲಿ ಅವಿತುಕೊಂಡಿದ್ದ ಕುಖ್ಯಾತ ಶ್ರೀಗಂಧ ಮರಗಳ್ಳರ ಮಾಫಿಯಾದ ಮುಖ್ಯಸ್ಥ ಮತ್ತು ಆತನ ಮಗನನ್ನು ಬಂಧನಕ್ಕೊಳಪಡಿಸಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಕಟ್ಟಿಗೆಹಳ್ಳಿ ಗ್ರಾಮದಲ್ಲಿ ದಾಳಿ ನಡೆದಿದ್ದು, ಇಲ್ಲಿನ ನಿವಾಸಿಗಳಾದ ಸೈಯದ್ ರಿಯಾಜ್ ಹಾಗೂ ಆತನ ಪುತ್ರ ಸೈಯದ್ ಷೇರ್ ಅಲಿ ಅಲಿಯಾಸ್ ಬಾಬಾ ಬಂಧನತ ವ್ಯಕ್ತಿಗಳಾಗಿದ್ದಾರೆ.
ಕೆಲ ತಿಂಗಳಿಂದ ಹೈಕೋರ್ಟ್ ಮುಖ್ಯ ನ್ಯಾಯಾಧೀಶರ ನಿವಾಸ ಸೇರಿದಂತೆ ನಗರದ ಅತ್ಯಂತ ಭದ್ರತಾ ವಲಯದಲ್ಲಿ ಗಂಧದ ಮರಗಳನ್ನು ರಿಯಾಜ್ ತಂಡವು ದರೋಡೆ ಮಾಡಿತ್ತು. ಇತ್ತೀಚೆಗೆ ಗುಂಡಿನ ದಾಳಿ ನಡೆಸಿ ಆ ತಂಡದ ಆರು ಮಂದಿಯನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದರು.
ತಮ್ಮ ಊರಿನಲ್ಲಿ ರಕ್ಷಣಾ ಕೋಟೆಯನ್ನು ಕಟ್ಟಿಕೊಂಡು ಆಶ್ರಯ ಪಡೆದಿದ್ದೆ ಈ ಇಬ್ಬಕು ಕುಖ್ಯಾತರು, ಕೆಲ ದಿನಗಳ ಹಿಂದೆ ತಮ್ಮನ್ನು ಬೆನ್ನು ಹಟ್ಟಿ ಬಂದ ಕೇಂದ್ರ ವಿಭಾಗದ ನಾಲ್ವರು ಪಿಎಸ್ಐಗಳ ಹತ್ಯೆಗೆ ಯತ್ನಿಸಿದ್ದರು. ಈ ಹಿನ್ನಲೆಯಲ್ಲಿ ಮುಂಜಾಗ್ರತೆ ವಹಿಸಿದ್ದ ಡಿಸಿಪಿ ದೇವರಾಜ್ ಅವರು, ಕೊನೆಗೂ ಮಾಫಿಯಾ ಡಾನ್ ಗಳ ಮನೆ ಮೇಲೆ ದೊಡ್ಡ ತಂಡದೊಂದಿಗೆ ದಾಳಿ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳಿಂದ ಪೊಲೀಸರು 350 ಗ್ರಾಂ ತೂಕದ ಚಿನ್ನದ ಆಭರಣ ಹಾಗೂ 9 ಕೆ.ಜಿ ಶ್ರೀಗಂಧ ಮರದ ಚಕ್ಕೆಗಳು ಹಾಗೂ ರೂ.35 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ.