ರಾಜ್ಯ

ಬೆಂಗಳೂರು: ಶೆಡ್ ಗಳನ್ನು ಧ್ವಂಸಗೊಳಿಸಿ ರೌಡಿಗಳ ಪುಂಡಾಟ

Nagaraja AB
ಬೆಂಗಳೂರು: ಭೂ ವಿವಾದಕ್ಕೆ ಸಂಬಂಧಿಸಿದಂತೆ  ಹೆಣ್ಣೂರಿನಲ್ಲಿ ರೌಡಿಗಳು ಪುಂಡಾಟ ಮೆರೆದಿದ್ದು, ಮೂರು ಕುಟುಂಬಗಳು ವಾಸಿಸುತ್ತಿದ್ದ ಸಣ್ಣ  ಶೆಡ್ ಗಳನ್ನು ಧ್ವಂಸಗೊಳಿಸಿದ್ದಾರೆ.
ಭೂಮಿಗೆ ಸಂಬಂಧಿಸಿದ ನೋಂದಣಿ ಪತ್ರ, ಮತ್ತಿತರ ಅಗತ್ಯ ದಾಖಲೆಗಳನ್ನು ಹೊಂದಿದ್ದರೂ ಕೂಡಾ ಸ್ಥಳೀಯ ರೌಡಿ ರಘು ನೇತೃತ್ವದಲ್ಲಿ ನುಗ್ಗಿದ್ದ ಸುಮಾರು 50ಕ್ಕೂ ಹೆಚ್ಚು ರೌಡಿಗಳು ಮನಬಂದಂತೆ ಹಲ್ಲೆ ನಡೆಸಿ, ಶೆಡ್ ಗಳಲ್ಲಿ ವಾಸಿಸುತ್ತಿದ್ದವರನ್ನು ಅಲ್ಲಿಂದ  ಓಡಿಸಿರುವ ಘಟನೆ ನಡೆದಿದೆ.
ಹೆನ್ನೂರಿನ ವಡ್ಡರಪಾಳ್ಯದ ಶಿರಡಿ ಸಾಯಿಬಾಬಾ ದೇವಸ್ಥಾನದ ಬಳಿ ಇರುವ 1 ಎಕರೆ , ಮೂರು ಗಂಟೆ ಆಸ್ತಿ ತನ್ನಗೆ ಬರಬೇಕೆಂದು ರಘು ವಾದಿಸುತ್ತಾನೆ. ವಿವಾದಿತ ಭೂಮಿ ಬಳಿ ಇರುವ ನಿವೇಶನಗಳು ಕೂಡಾ ತನ್ನದೇ ಎಂದು ರಘು ಹೇಳುತ್ತಿದ್ದಾನೆ ಎಂದು ನಿವಾಸಿಗಳು ಆರೋಪಿಸಿದ್ದಾರೆ.
ಬುಧವಾರ ಬೆಳಗ್ಗೆ 1-30 ರ ಸುಮಾರಿನಲ್ಲಿ ಈ ಘಟನೆ ನಡೆದಿದೆ.  ಶೆಡ್ ಗಳಿಗೆ ನುಗ್ಗಿರುವ ರೌಡಿಪಡೆ ತಮ್ಮ ಮೇಲೆ ಹಲ್ಲೆ ನಡೆಸಿರುವುದಲ್ಲದೇ, ಮೂರು ಜೆಸಿಬಿಗಳ ಮೂಲಕ ಶೆಡ್ ಗಳನ್ನು  ಧ್ವಂಸಗೊಳಿಸಿದೆ ಎಂದು ಸಂತ್ರಸ್ತರು ಅಳಲು ತೋಡಿಕೊಂಡಿದ್ದಾರೆ. ಕೆಲವರು ಚೈನ್ ಗಳನ್ನು ದೋಚಿದ್ದಾರೆ ಎಂದು ಖೈರುನಿಸ್ಸಾ ಆರೋಪಿಸಿದ್ದಾರೆ.
ಪೊಲೀಸರು ಸ್ಥಳಕ್ಕಾಗಮಿಸುತ್ತಿದ್ದಂತೆ ರೌಡಿಗಳು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಆದರೆ, ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಇಬ್ಬರು ಡ್ರೈವರ್ ಗಳನ್ನು ಬಂಧಿಸಿದ್ದಾರೆ ಎಂದು ಹೆಣ್ಣೂರು ನಿವಾಸಿ ಸತೀಶ್ ಪಿಲೈ ಹೇಳಿದ್ದಾರೆ.
ನೀರಿನ ತೊಂದರೆಯಿಂದಾಗಿ ಆ ಪ್ರದೇಶದಲ್ಲಿ ಯಾವುದೇ ಮನೆಗಳನ್ನು ನಿರ್ಮಿಸುತ್ತಿಲ್ಲ, ಎಲ್ಲಾ ಅಗತ್ಯದಾಖಲೆಗಳೊಂದಿಗೆ ಭೂಮಿಯನ್ನು ನೀಡಲಾಗಿದೆ. ಆದರೆ, ರಘು ನೇತೃತ್ವದಲ್ಲಿನ ರೌಡಿಗಳು ಆಗಾಗ್ಗೆ ಬಂದು ತೊಂದರೆ ನೀಡುತ್ತಿದ್ದಾರೆ ಎಂದು ಭೂ ಮಾಲೀಕರಲ್ಲಿ ಒಬ್ಬರಾದ ಯಸ್ಮಿನ್ ಅಬ್ದುಲ್ ಅಹ್ಮದ್ ಹೇಳಿದ್ದಾರೆ.
ಈ ಪ್ರಕರಣ ಸಂಬಂಧ ಎಫ್ ಐಆರ್ ದಾಖಲಿಸಲಾಗಿದೆ ಎಂದು ಹೆಣ್ಣೂರು ಪೊಲೀಸ್ ಠಾಣೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ರಘು ಮತ್ತಿತರ ವಿರುದ್ಧ ವಿವಿಧ  ಸೆಕ್ಷನ್ ಗಳಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
SCROLL FOR NEXT