ರಾಜ್ಯ

ಮಳೆ ಭೀತಿ: ಕೊಡಗಿನಲ್ಲಿ ಆಗಸ್ಟ್ 31ರವರೆಗೆ ಹೋಮ್‍ ಸ್ಟೇ, ರೆಸಾರ್ಟ್ ಬಂದ್ ಮಾಡಲು ಸೂಚನೆ

Srinivasamurthy VN
ಮಡಿಕೇರಿ: ಮುಂಗಾರು ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗೃತಾ ಕ್ರಮವಾಗಿ ಆಗಸ್ಟ್ 31ರವರೆಗೆ ಪ್ರವಾಸಿಗರಿಗೆ ಆತಿಥ್ಯ ನೀಡದಂತೆ ಕೊಡಗು ಜಿಲ್ಲಾಡಳಿತ, ಹೋಮ್‌ಸ್ಟೇ ಮತ್ತು ರೆಸಾರ್ಟ್‌ ಮಾಲೀಕರಿಗೆ ನೋಟಿಸ್‍ ಜಾರಿ ಮಾಡಿದೆ.
ಭೂ ಕುಸಿತ ಉಂಟಾಗುವ ಸಾಧ್ಯತೆ ಇರುವ ಮಕ್ಕಂದೂರಿನಲ್ಲಿ ಆಗಸ್ಟ್ 31ರವರೆಗೆ ಪ್ರವಾಸಿಗರಿಗೆ ಆತಿಥ್ಯ ನೀಡಬಾರದು ಎಂದು ಮಕ್ಕಂದೂರು ಪಂಚಾಯತ್, ಅಲ್ಲಿನ 21ಕ್ಕೂ ಅಧಿಕ ಹೋಮ್‌ಸ್ಟೇ ಮತ್ತು ಒಂದು ರೆಸಾರ್ಟ್‌ಗೆ ನೋಟಿಸ್ ನೀಡಿದೆ. ಒಂದು ವೇಳೆ ಈ ಆದೇಶವನ್ನು ಉಲ್ಲಂಘಿಸಿದರೆ, ಪ್ರಾಕೃತಿಕ ವಿಕೋಪ ಉಂಟಾದರೆ ಪ್ರವಾಸಿಗರ ಸುರಕ್ಷತೆಯ ಹೊಣೆ ಹೊರಬೇಕಾಗುತ್ತದೆ ಎಂದು ಅಧಿಕಾರಿಗಳು ಹೋಮ್‌ಸ್ಟೇ ಮತ್ತು ರೆಸಾರ್ಟ್ ಮಾಲೀಕರಿಗೆ ಎಚ್ಚರಿಕೆ ನೀಡಲಾಗಿದೆ.
ಇದಕ್ಕೂ ಮೊದಲು ಕೊಡಗು ಜಿಲ್ಲಾಡಳಿತ ಭಾರತೀಯ ಭೂ ವಿಜ್ಞಾನ ಸರ್ವೆಯ ವಿಜ್ಞಾನಿಗಳು ಮತ್ತು ಇತರ ತಜ್ಞರ ಸಭೆ ನಡೆಸಿತ್ತು. ಕಳೆದ ವರ್ಷದಂತೆ ಈ ವರ್ಷವೂ ಪ್ರವಾಹ ಮತ್ತು ಭೂ ಕುಸಿತ ಸಂಭವಿಸುವ ಅಪಾಯವಿದೆ ಎಂದು ಸಭೆಯಲ್ಲಿ ತಜ್ಞರು ಜಿಲ್ಲಾಧಿಕಾರಿ ಅನ್ನೀಸ್ ಕಣ್ಮನಿ ಜಾಯ್ ಮತ್ತು ಇತರ ಅಧಿಕಾರಿಗಳಿಗೆ ಮುನ್ನೆಚ್ಚರಿಕೆ ನೀಡಿದ್ದರು. ಮಾತ್ರವಲ್ಲ ಬೆಟ್ಟ ಪ್ರದೇಶಗಳಲ್ಲಿ ಕಾರ್ಯಾಚರಿಸುತ್ತಿರುವ ಹೋಮ್‍ ಸ್ಟೇ ಮತ್ತು ರೆಸಾರ್ಟ್‌ಗಳನ್ನು ಮುಂಜಾಗೃತಾ ಕ್ರಮವಾಗಿ ಆಗಸ್ಟ್ 31ರವರೆಗೆ ಮುಚ್ಚುವಂತೆ ಸಲಹೆ ನೀಡಿದ್ದರು. ಈ ಕಾರಣದಿಂದ ಜಿಲ್ಲಾಡಳಿತ ಈ ಕ್ರಮಕ್ಕೆ ಮುಂದಾಗಿದೆ.
ಮಕ್ಕಂದೂರು ಗ್ರಾಮ ಪಂಚಾಯತ್ ಮುಂಜಾಗೃತಾ ಕ್ರಮಕೈಗೊಂಡಿದೆ. ಇದೇ ಮಾದರಿಯ ಕ್ರಮಗಳನ್ನು ಕೆ ನಿಡುಗನೆ, ಗಾಳಿಬೀಡು, ಹಟ್ಟಿಹೊಳೆ, ಕಾಲೂರು, ಮೊನ್ನಂಗೇರಿ, ಎರಡನೇ ಮೊನ್ನಂಗೇರಿ, ಹೆಬ್ಬಟಗೇರಿ ಸೇರಿದಂತೆ ಇತರ ಗ್ರಾಮ ಪಂಚಾಯತ್‌ಗಳೂ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಆದಾಗ್ಯೂ, ತಮ್ಮ ನಿರ್ಧಾರವನ್ನು ಪುನರ್ ಪರಿಶೀಲಿಸುವಂತೆ ಹೋಮ್‍ ಸ್ಟೇ ಮತ್ತು ರೆಸಾರ್ಟ್ ಮಾಲೀಕರು ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ಕಳೆದ ವರ್ಷ ದುರಂತ ಸಂಭವಿಸಿದಾಗ ಹಾನಿಗೊಳಗಾದ ಕಟ್ಟಡಗಳನ್ನು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ರಿಪೇರಿ ಮಾಡಲಾಗಿದೆ. ಈ ವರ್ಷವೂ ವ್ಯವಹಾರ ನಷ್ಟವಾದರೆ ಸಂಕಷ್ಟ ಅನುಭವಿಸಬೇಕಾಗುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
SCROLL FOR NEXT