ರಾಜ್ಯ

ಮಂಗಳೂರಿನಲ್ಲಿ ಅಗ್ನಿ ಅವಘಡಕ್ಕೆ ತುತ್ತಾದ ಹಡಗಿನಿಂದ 46 ಜನರ ರಕ್ಷಣೆ

Srinivasamurthy VN
ಮಂಗಳೂರು: ಮಂಗಳೂರಿನಲ್ಲಿ ಸಂಶೋಧನಾ ಹಡಗಿನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಕೂಡಲೇ ರಕ್ಷಣೆಗೆ ಧಾವಿಸಿದ ಕರಾವಳಿ ಭದ್ರತಾಪಡೆಗಳು ಹಡಗಿನಲ್ಲಿದ್ದ 46 ಮಂದಿಯನ್ನು ರಕ್ಷಿಸಿದ್ದಾರೆ.
ಇಲ್ಲಿನ ಸಮುದ್ರ ತೀರದಿಂದ 30 ಸಮುದ್ರ ಮೈಲಿ ದೂರದಲ್ಲಿ ಶುಕ್ರವಾರ ರಾತ್ರಿ ಅಗ್ನಿ ಹಡಗೊಂದು ಅಗ್ನಿ ಅವಘಡಕ್ಕೆ ತುತ್ತಾಗಿದ್ದು, ಅದರಲ್ಲಿದ್ದ 46 ಮಂದಿಯನ್ನು ಕರಾವಳಿ ಕಾವಲು ಪಡೆ ಪ್ರಾಣಾಪಾಯದಿಂದ ರಕ್ಷಿಸಿದೆ.  ಶಿಪ್ಪಿಂಗ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾದ 'ಸಾಗರ ಸಂಪದ' ಸಂಶೋಧನಾ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, 30 ಸಿಬ್ಬಂದಿ ಹಾಗೂ 16 ಭಾರತೀಯ ಸಂಶೋಧನಾ ವಿಜ್ಞಾನಿಗಳು ಅದರಲ್ಲಿದ್ದರು ಎಂದು ಮೂಲಗಳು ತಿಳಿಸಿವೆ.
ಸುಮಾರು 10 ಗಂಟೆಗೆ ಸಮುದ್ರದಲ್ಲಿ ಬೆಂಕಿಯನ್ನು ಕಂಡ ಕರಾವಳಿ ಕಾವಲು ಪಡೆ ಅಧಿಕಾರಿಗಳು ತುರ್ತಾಗಿ ಸಂಬಂಧಿತರಿಗೆ ಸಂದೇಶ ರವಾನಿಸಿದ್ದಾರೆ. ವಿಪತ್ತಿನ ಕರೆಯನ್ನು ಸ್ವೀಕರಿಸಿದ ನೌಕಾಪಡೆ, ತಕ್ಷಣ ರಕ್ಷಣಾ ತಂಡವನ್ನು ಕಳುಹಿಸಿಕೊಟ್ಟಿದೆ.
ಹಡಗನ್ನು ಪ್ರವೇಶಿಸಿದ ರಕ್ಷಣಾ ತಂಡ, ಬೆಂಕಿ ನಂದಿಸಿ ಒಳಗಿದ್ದವರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದೆ. ಹಡಗಿನ ಕ್ಯಾಬಿನ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, 8 ಕ್ಯಾಬಿನ್ ಗಳು ಹಾನಿಗೊಂಡಿವೆ ಎನ್ನಲಾಗಿದೆ. ಹಡಗಿನಲ್ಲಿದ್ದ ಎಲ್ಲರನ್ನೂ ಸುರಕ್ಷಿತವಾಗಿ ಮಂಗಳೂರು ಬಂದರಿಗೆ ಕರೆ ತರಲಾಗಿದೆ. ನೆರವಿಗಾಗಿ ಹಡಗು ಮಂಗಳೂರು ಬಂದರಿನತ್ತ ಬರುತ್ತಿತ್ತು ಎನ್ನಲಾಗಿದೆ.
SCROLL FOR NEXT