ರಾಜ್ಯ

ಬೆಂಗಳೂರು: ಎರಡು ಪ್ರತ್ಯೇಕ ಅಪಘಾತದಲ್ಲಿ ವೃದ್ಧೆ, ಪದವಿ ವಿದ್ಯಾರ್ಥಿ ದುರ್ಮರಣ

Lingaraj Badiger
ಬೆಂಗಳೂರು: ಆರೋಗ್ಯ ತಪಾಸಣೆಗೆಂದು ಹಾಸನದಿಂದ ಬಂದಿದ್ದ ವೃದ್ದೆಯೊಬ್ಬರು ಪ್ರಯಾಣಿಸುತ್ತಿದ್ದ ಬೈಕ್ ಗೆ ಓಲಾ ಕ್ಯಾಬ್ ಡಿಕ್ಕಿ ಹೊಡೆದಿದ್ದು, ವೃದ್ಧೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸಿಟಿ ಮಾರುಕಟ್ಟೆ ಬಳಿ ಸಂಭವಿಸಿದ ಮತ್ತೊಂದು ಅಪಘಾತದಲ್ಲಿ ತಮಿಳುನಾಡು ಬಸ್ ಡಿಕ್ಕಿ ಹೊಡೆದು ಪದವಿ ಓದುತ್ತಿದ್ದ ವಿದ್ಯಾರ್ಥಿ ಅಸುನೀಗಿದ್ದಾನೆ.
ಮೊಮ್ಮಗ ವಿನಯ್ ಜತೆ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ಮಾಡಿಕೊಂಡು ಮನೆಗೆ ವಾಪಸ್ ಆಗುತ್ತಿದ್ದ ಹಾಸನದ ಗಂಗಮ್ಮ [65] ಮೃತಪಟ್ಟಿದ್ದಾರೆ. ಪೀಣ್ಯ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಪೈಪ್‌ಲೇನ್ ರಸ್ತೆಯಲ್ಲಿ ಈ ದುರಂತ ಸಂಭವಿಸಿದೆ. ಗಂಭೀರವಾಗಿ ಗಾಯಗೊಂಡಿರುವ ವಿನಯ್ ಇದೀಗ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾನೆ. 
ಹಾಸನದಿಂದ ಪೀಣ್ಯದ ಮಗಳ ಮನೆಗೆ ಬಂದಿದ್ದ ಅಜ್ಜಿ ಗಂಗಮ್ಮ ಅವರನ್ನು ವಿನಯ್ ಬೈಕ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ದು ಆರೋಗ್ಯ ತಪಾಸಣೆ ಮಾಡಿಸಿಕೊಂಡು ವಾಪಸ್ ಪೈಪ್‌ಲೇನ್ ರಸ್ತೆಯ ಅಂಕಲ್ ಕಿಚನ್ ಬಳಿ ಬರುತ್ತಿದ್ದಾಗ ಬಸವೇಶ್ವರ ಬಸ್ ನಿಲ್ದಾಣದ ಕಡೆಯಿಂದ ಮುಖ್ಯರಸ್ತೆಗೆ ವೇಗವಾಗಿ ಬಂದ ಓಲಾ ಕಾರು ಡಿಕ್ಕಿ ಹೊಡೆದಾಗ ಕಾರಿನಡಿ ಸಿಲುಕಿದ ಗಂಗಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. 
ಪೀಣ್ಯ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿ ಕ್ಯಾಬ್ ಚಾಲಕನನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ಸೌಮ್ಯಲತಾ ತಿಳಿಸಿದ್ದಾರೆ.
ಇನ್ನು ಸಿಟಿ ಮಾರುಕಟ್ಟೆಯ ಬಾಲಗಂಗಾಧರನಾಥ ಸ್ವಾಮಿ ಮೇಲ್ಸೇತುವೆ ರಸ್ತೆಯಲ್ಲಿ ವೇಗವಾಗಿ ಬಂದ ತಮಿಳುನಾಡು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಡಿಕ್ಕಿ ಹೊಡೆದು ಸ್ಕೂಟರ್‌ನಲ್ಲಿ ಹೋಗುತ್ತಿದ್ದ ಕುಮಾರ ಸ್ವಾಮಿ ಬಡಾವಣೆಯ ಜಗದೀಶ್ [19] ಮೃತಪಟ್ಟಿದ್ದಾರೆ.
ಶಾಂತಿನಗರದಿಂದ ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣಕ್ಕೆ ಹೋಗುತ್ತಿದ್ದ ತಮಿಳುನಾಡು ಬಸ್ ಜಗದೀಶ್ ಅವರಿಗೆ ಹಿಂದಿನಿಂದ ಡಿಕ್ಕಿ ಹೊಡೆಯಿತು. ಗಂಭೀರವಾಗಿ ಗಾಯಗೊಂಡ ಅವರನ್ನು ಕೂಡಲೇ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಸಿಟಿ ಮಾರುಕಟ್ಟೆ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿ ಬಸ್ ಚಾಲಕ ಮೊಹ್ಮದ್ ಘನಿಯನ್ನು ಬಂಧಿಸಿದ್ದಾರೆ.
SCROLL FOR NEXT