ರಾಜ್ಯ

ಬಿಜೆಪಿಯಿಂದ ಗಾಂಧಿ ಹೆಸರು ದುರ್ಬಳಕೆ: ಎಚ್.ಎಸ್ ದೊರೆಸ್ವಾಮಿ

Srinivas Rao BV
ಬೆಂಗಳೂರು: ರಾಷ್ಟ್ರಪಿತ ಮಹಾತ್ಮ ಗಾಂಧಿ ನೆಪವನ್ನಿಟ್ಟುಕೊಂಡು ಬಿಜೆಪಿ ಮತ್ತು ಆರ್ಎಸ್ಎಸ್ ಸಮಾಜದಲ್ಲಿ ವಿಷ ಹರಡುತ್ತಿವೆ ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್ ದೊರೆಸ್ವಾಮಿ ಟೀಕಿಸಿದ್ದಾರೆ.
ನಗರದಲ್ಲಿ ಇಂದು ಗಾಂಧಿ ಭವನದ ಆವರಣದಲ್ಲಿ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಆಯೋಜಿಸಿದ್ದ ‘ಸಬ್ ಕೋ ಸನ್ಮತಿ ದೇ ಭಗವಾನ್’ ಮೌನ ಸತ್ಯಾಗ್ರಹದ ನೇತೃತ್ವ ವಹಿಸಿ ಮಾತನಾಡಿದ ಅವರು, ಗೋಡ್ಸೆ ಗಾಂಧಿ ಮಾತ್ರವಲ್ಲದೆ, ಸತ್ಯವನ್ನೂ ಕಗ್ಗೊಲೆ ಮಾಡಿದ. ಆದರೆ ಕೆಲವರು ತಪ್ಪನ್ನು ಸಮರ್ಥನೆ ಮಾಡುತ್ತಾರೆ. ಇನ್ನೂ ಸಮಾಜದಲ್ಲಿ ವಿಷ ಹರಡುವುದನ್ನೇ ಬಿಜೆಪಿ ಆರ್ ಎಸ್ಎಸ್ ಕಾಯಕ ಮಾಡಿಕೊಂಡಿದೆ. ಗೋಡ್ಸೆ ಪುಸ್ತಕ ಬಂದಿದ್ದು, ಅದರಲ್ಲಿ ಆತ ಗಾಂಧಿ ಅವರು ಮಹಮ್ಮದೀಯರ ಪರವಾಗಿ ಇರುವುದರಿಂದ ಕೊಲೆ ಮಾಡಿದೆ ಎನ್ನುತ್ತಾರೆ. ಆದರೆ, ಇದರಲ್ಲಿ ಸತ್ಯ ಇಲ್ಲ ಎಂದ ಅವರು, ಯಾರೂ ಸಹ ಇತಿಹಾಸವನ್ನು ತಿರುಚುವುದು ಸರಿಯಲ್ಲ ಎಂದರು. 
ಸಾವರ್ಕರ್ ಹೇಡಿ: ಹಿಂದುತ್ವವಾದಿ ವಿನಾಯಕ್ ದಾಮೋದರ್ ಸಾವರ್ಕರ್ ಜೈಲಿನಿಂದ ಬಿಡುಗಡೆಯಾಗಲು ಬ್ರಿಟಿಷರ ಮುಂದೆ ಅಂಗಲಾಚಿದ್ದ. ಅಷ್ಟೇ ಅಲ್ಲದೆ, ತನ್ನನ್ನು ಬಿಡುಗಡೆಗೊಳಿಸಿದರೆ ಕ್ಷಮೆ ಕೋರುವುದಾಗಿ ಬ್ರಿಟಿಷ್ ವಸಾಹತು ಆಡಳಿತಗಾರರಿಗೆ ಪತ್ರ ಬರೆದಿದ್ದ. ಹೀಗಾಗಿ ಆತ ಹೇಡಿ. ಆದರೆ ಭಗತ್ ಸಿಂಗ್ ಅವರನ್ನು ನೇಣಿಗೆ ಹಾಕಿದರೂ ಬ್ರಿಟಿಷರಿಗೆ ಎಂದೂ ತಲೆ ಬಾಗಿಲ್ಲ ಎಂದು ದೊರೆಸ್ವಾಮಿ ಹೇಳಿದರು. 
ಮೋದಿಗೆ ಪೂರ್ಣತೆ ಇಲ್ಲ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಮ್ಮ ದೇಶದ ಇತಿಹಾಸದ ಬಗ್ಗೆ ಪೂರ್ಣವಾಗಿ ಓದಿಕೊಂಡಿಲ್ಲ. ಜತೆಗೆ, ಅವರಿಗೆ ಜ್ಞಾನವೂ ಇಲ್ಲ ಆದ್ದರಿಂದ ಗಾಂಧಿ ಬಗ್ಗೆ ತಪ್ಪು ಮಾಹಿತಿ ಪ್ರಚಾರ ಮಾಡುತ್ತಿದ್ದಾರೆ ಎಂದರು.
ರಂಗಕರ್ಮಿ ಪ್ರಸನ್ನ ಹೆಗ್ಗೋಡು ಮಾತನಾಡಿ, ಗಾಂಧಿ ಹಾಗೂ ಗೋಡ್ಸೆ ಇಬ್ಬರೂ ರಾಮನ ಭಕ್ತರೇ ಆದರೂ ಗಾಂಧಿಯನ್ನು ಕೊಲೆ ಮಾಡಿದ. ರಾಮ ರಾಜ್ಯದ ಕುರಿತು ಇಬ್ಬರ ಪರಿಕಲ್ಪನೆ ಭಿನ್ನವಾಗಿತ್ತು. ಗಾಂಧೀಜಿಯವರದ್ದು ಗ್ರಾಮಾಭಿವೃದ್ಧಿ ರಾಮ ರಾಜ್ಯ ಕಲ್ಪನೆಯಾದರೆ ಗೋಡ್ಸೆಯದ್ದು ಪುರೋಹಿತ ಶಾಹಿ, ಬ್ರಾಹ್ಮಣೀಯ ರಾಮರಾಜ್ಯ ಪರಿಕಲ್ಪನೆಯಾಗಿತ್ತು. ಹೀಗಾಗಿ ನಾವು ಇವರಿಬ್ಬರ ಯಾವ ರಾಮರಾಜ್ಯ ಪರಿಕಲ್ಪನೆ ನಮ್ಮ ದೇಶಕ್ಕೆ ಅವಶ್ಯಕ ಎಂಬುದನ್ನು ಅರ್ಥೈಸಿಕೊಂಡು ಮುಂದೆ ಸಾಗಬೇಕು. ಅದನ್ನು ಬಿಟ್ಟು ಗಾಂಧಿ ಪ್ರತಿಮೆ ಧ್ವಂಸ, ಅವಹೇಳನಕಾರಿ ಮಾತು, ವಿರೋಧಿ ನಡೆಯಿಂದಲ್ಲ ಎಂದು ಹೇಳಿದರು   
ಕರ್ನಾಟಕ ಗಾಂಧೀ ಸ್ಮಾರಕ ನಿಧಿ ಅಧ್ಯಕ್ಷ  ಡಾ. ವೂಡೇ ಪಿ.ಕೃಷ್ಣ ಮಾತನಾಡಿ, ಭಾರತ ಎಂದರೆ ಗಾಂಧಿ ಎನ್ನುವ ಅರ್ಥವಿದೆ.  ಹೀಗಾಗಿ ಯುವ ಸಮುದಾಯ ಮೊದಲು ಗಾಂಧಿ ಕುರಿತು ಓದಿ ಅರ್ಥೈಸಿಕೊಳ್ಳಬೇಕು ಆಗ ಮಾತ್ರ ಅವರ ಬಗ್ಗೆ ಗೌರವ ಬರುತ್ತದೆ. ಆದರೆ ಕೆಲ ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಗಾಂಧಿ ಕುರಿತು ಅವಹೇಳನಕಾರಿ ಟೀಕೆ ಮಾಡುತ್ತಿದ್ದಾರೆ. ಇದರ ಜೊತೆಗೆ ಕೆಲ ರಾಜಕೀಯ ಪಕ್ಷಗಳು, ಜನ ಪ್ರತಿನಿಧಿಗಳು ಕೈ ಜೋಡಿಸುತ್ತಿರುವುದು ದುರದೃಷ್ಟಕರ ಎಂದು ಬೇಸರ ವ್ಯಕ್ತಪಡಿಸಿದರು.  
ಈ ಸಂದರ್ಭದಲ್ಲಿ ಮಾಜಿ ಅಡ್ವೋಕೇಟ್ ಜನರಲ್ ಪ್ರೊ.ರವಿವರ್ಮ ಕುಮಾರ್, ಸಾಹಿತಿ ಡಾ.ಬೈಲಹೊಂಗಲ ರಾಮೇಗೌಡ, ಗಾಂಧಿ ಭವನ ಗೌರವ ಕಾರ್ಯದರ್ಶಿ ಇಂದಿರಾ ಕೃಷ್ಣಪ್ಪ, ಜಲತಜ್ಞ ರಾಜೇಂದ್ರ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
SCROLL FOR NEXT