ರಾಜ್ಯ

ಶ್ರೀ ಕ್ಷೇತ್ರದಲ್ಲಿ ತೀವ್ರ ನೀರಿನ ಅಭಾವ; ಧರ್ಮಸ್ಥಳದಲ್ಲಿ ಚೆಕ್ ಡ್ಯಾಂ ನಿರ್ಮಾಣಕ್ಕೆ ಸರ್ಕಾರ ಚಿಂತನೆ

Srinivasamurthy VN
ಬೆಂಗಳೂರು: ಶ್ರೀಕ್ಷೇತ್ರ  ಧರ್ಮಸ್ಥಳದಲ್ಲಿ ನೀರಿನ ಅಭಾವ ತೀವ್ರಗೊಂಡ ಬೆನ್ನಲ್ಲೇ ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಚೆಕ್ ಡ್ಯಾಂ ನಿರ್ಮಾಣದ ಕುರಿತು ಗಂಭೀರ ಚಿಂತನೆಯಲ್ಲಿ ತೊಡಗಿದೆ.
ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವಿರೇಂದ್ರ ಹೆಗಡೆ ಅವರ ಹೇಳಿಕೆ ಬೆನ್ನಲ್ಲೇ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಈ ಕುರಿತು ಗಂಭೀರ ಆಲೋಚನೆಯಲ್ಲಿ ತೊಡಗಿದೆ. ಈ ಕುರಿತಂತೆ ಮುಖ್ಯಮಂತ್ರಿ ಎಚ್ ಡಿಕೆ ಸಲಹೆ ಮೇರೆಗೆ ರಾಜ್ಯದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿ ಧರ್ಮಸ್ಥಳದಲ್ಲಿರುವ ನೀರಿನ ಅಭಾವದ ಬಗ್ಗೆ ಚರ್ಚೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಶ್ರೀಕ್ಷೇತ್ರದಲ್ಲಿ ಇನ್ನೊಂದು ಚೆ ಕ್‍ಡ್ಯಾಂ ನಿರ್ಮಾಣ ಮಾಡಿಕೊಡುವಂತೆ ಶ್ರೀ ಹೆಗ್ಗಡೆಯವರು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರು ಎನ್ನಲಾಗಿದೆ. 
ಈ ಹಿನ್ನೆಲೆಯಲ್ಲಿ ಮುಖ್ಯ ಕಾರ್ಯದರ್ಶಿಗಳ ಸೂಚನೆಯಂತೆ ದ.ಕ. ಜಿ.ಪಂ. ಸಿಇಒ ಹಾಗೂ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆಗಾಗಿ ಇಂದು ಸಂಜೆ ಧರ್ಮಸ್ಥಳಕ್ಕೆ ಭೇಟಿ ನೀಡಲಿದ್ದಾರೆ ಎಂದು ಸಿಎಂ ಕುಮಾರಸ್ವಾಮಿ ಟ್ವಿಟ್ಟರ್‍ ನಲ್ಲಿ ತಿಳಿಸಿದ್ದಾರೆ.
ಈ ಹಿಂದೆ ಹಿಂದೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಡಾ.ಡಿ ವೀರೇಂದ್ರ ಹೆಗ್ಗಡೆ ಅವರು, 15 ದಿನ ಮಳೆ ಬರದಿದ್ದರೆ ಮಂಜುನಾಥನ ಅಭಿಷೇಕಕ್ಕೂ ನೀರಿಲ್ಲ. ಈಗ ಅಭಿಷೇಕಕ್ಕೆ ನೇತ್ರಾವತಿಯಲ್ಲಿ ತಾತ್ಕಲಿಕವಾಗಿ ನೀರಿದೆ ಎಂದು ತಮ್ಮ ಕಳವಳವನ್ನು ಹೊರಹಾಕಿದ್ದರು. ಶ್ರೀ ಕ್ಷೇತ್ರದಲ್ಲಿ ನೀರಿನ ಅಭಾವ ಇರುವ ಹಿನ್ನೆಲೆ ಧರ್ಮಸ್ಥಳಕ್ಕೆ ಬರುವ ಯಾತ್ರಾರ್ಥಿಗಳ ಉಪಯೋಗಕ್ಕೆ ಅಧಿಕ ಪ್ರಮಾಣದ ನೀರು ಬೇಕಾಗುತ್ತದೆ. ಆದ್ದರಿಂದ ಭಕ್ತಾದಿಗಳು ಹಾಗೂ ಪ್ರವಾಸಿಗರು ತಮ್ಮ ಪ್ರವಾಸವನ್ನು ಕೆಲವು ದಿನಗಳ ಕಾಲ ಮುಂದೂಡಿ ಸಹಕರಿಸುವಂತೆ ವೀರೇಂದ್ರ ಹೆಗ್ಗಡೆಯವರು ಮನವಿಯನ್ನು ಮಾಡಿಕೊಂಡಿದ್ದರು. ಇದು ವ್ಯಾಪಕ ಸುದ್ದಿಗೂ ಗ್ರಾಸವಾಗಿತ್ತು. 
SCROLL FOR NEXT