ರಾಜ್ಯ

ಸಿದ್ದಗಂಗಾ ಶ್ರೀಗಳ ಹುಟ್ಟೂರು ವೀರಾಪುರದಲ್ಲಿ 111 ಅಡಿ ಎತ್ತರದ ಪ್ರತಿಮೆ ನಿರ್ಮಾಣಕ್ಕೆ ನಾಳೆ ಸಿಎಂ ಚಾಲನೆ

Lingaraj Badiger

ರಾಮನಗರ: ನಡೆದಾಡುವ ದೇವರು ಎಂದೇ ಜನಮಾನಸದಲ್ಲಿ ಗುರುತಿಸಿಕೊಂಡಿದ್ದ ತುಮಕೂರಿನ ಸಿದ್ದಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿ ಅವರ ಹುಟ್ಟೂರು ವೀರಾಪುರ ಗ್ರಾಮದಲ್ಲಿ ಸ್ವಾಮೀಜಿ ಅವರ 111 ಅಡಿ ಎತ್ತರದ ಪ್ರತಿಮೆ ನಿರ್ಮಾಣ ಕಾರ್ಯಕ್ಕೆ ಶುಕ್ರವಾರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಮಾಗಡಿ ತಾಲ್ಲೂಕಿನ ವೀರಾಪುರ ಗ್ರಾಮದಲ್ಲಿ ಪ್ರತಿಮೆ ನಿರ್ಮಾಣ, ವಸ್ತು ಸಂಗ್ರಹಾಲಯ, ಉದ್ಯಾನವನ, ಧ್ಯಾನ ಕೇಂದ್ರ ನಿರ್ಮಾಣಕ್ಕೆ ಸರ್ಕಾರ ೨೫ ಕೋಟಿ ರೂಗಳನ್ನು ಬಿಡುಗಡೆ ಮಾಡಿದೆ.

ರಾಮನಗರ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಎಂ. ರುದ್ರೇಶ್ ಮಾತನಾಡಿ, ಮೊದಲ ಹಂತದಲ್ಲಿ ಗ್ರಾಮದ 17 ಎಕರೆ ಸರ್ಕಾರಿ ಭೂಮಿಯಲ್ಲಿ ಕಾಮಗಾರಿ ಪ್ರಾರಂಭವಾಗುತ್ತಿದ್ದು, ಸುತ್ತಮುತ್ತಲ ಜಮೀನನ್ನು ಖರೀದಿಸಿ ಉತ್ತಮ ಪ್ರವಾಸಿ ಕೇಂದ್ರ ಮಾಡುವ ಉದ್ದೇಶ ಹೊಂದಲಾಗಿದೆ. ಈ ಬಗ್ಗೆ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಅವರೊಂದಿಗೆ ಚರ್ಚಿಸಲಾಗಿದೆ ಎಂದರು.

ಕಳೆದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಶ್ರೀಗಳ ಹುಟ್ಟೂರನ್ನು ಸಾಂಸ್ಕೃತಿಕ ಹಾಗೂ ಪಾರಂಪರಿಕಾ ಗ್ರಾಮವಾಗಿ ಮಾಡಬೇಕೆಂದು ಚಿಂತನೆ ನಡೆಸಿ 25 ಕೋಟಿ ರೂಪಾಯಿ ಹಣವನ್ನು ಘೋಷಣೆ ಮಾಡಿತ್ತು. ಈಗ ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಹಣ ಬಿಡುಗಡೆಯಾಗಿದ್ದು, ಶ್ರೀಗಳ 111 ಅಡಿ ಎತ್ತರದ ಬೃಹತ್ ಪ್ರತಿಮೆಯನ್ನು 16 ಎಕರೆ ಪ್ರದೇಶದಲ್ಲಿ ನಿರ್ಮಾಣ ಮಾಡುವುದಕ್ಕೆ ರಾಜ್ಯ ಸರ್ಕಾರ ನಿರ್ಧರಿಸಿದೆ. ಜೊತೆಗೆ ಉದ್ಯಾನವನ ಸೇರಿದಂತೆ ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡಲು ಚಿಂತನೆ ನಡೆಸಿದೆ.

SCROLL FOR NEXT