ರಾಜ್ಯ

ಈರುಳ್ಳಿ ನಂತರ ಇದೀಗ ಗ್ರಾಹಕರಲ್ಲಿ ಕಣ್ಣೀರು ತರಿಸುತ್ತಿದೆ ಬೆಳ್ಳುಳ್ಳಿ

Sumana Upadhyaya

ಬೆಂಗಳೂರು: ಇಲ್ಲಿಯವರೆಗೆ ಈರುಳ್ಳಿ ಗ್ರಾಹಕರ ಕಣ್ಣಲ್ಲಿ ಕಣ್ಣೀರು ತರಿಸಿದರೆ ಇದೀಗ ಬೆಳ್ಳುಳ್ಳಿ ಸರದಿ. ಈಗ ದಸರಾ ಹಬ್ಬ, ಇನ್ನು ಕೆಲ ದಿನಗಳಲ್ಲಿ ದೀಪಾವಳಿ ಈ ಹಬ್ಬಗಳ ನಡುವೆ ಬೆಳ್ಳುಳ್ಳಿ ಬೆಲೆ ಕೆಜಿಗೆ 232 ರೂಪಾಯಿಗೆ ಏರಿದೆ. ಸಿಪ್ಪೆ ಸುಲಿದ ಬೆಳ್ಳುಳ್ಳಿ ಬೆಲೆ ಮಾರುಕಟ್ಟೆಯಲ್ಲಿ ಕೆಜಿಗೆ 267 ರೂಪಾಯಿ ಆಗಿದೆ.


ಹಾಪ್ ಕಾಮ್ಸ್ ನ ಸಿಬ್ಬಂದಿ ಹೇಳುವ ಪ್ರಕಾರ, ಉತ್ತಮ ಗುಣಮಟ್ಟದ ಬೆಳ್ಳುಳ್ಳಿ ಬೆಲೆ ಸಾಮಾನ್ಯವಾಗಿ ಹೆಚ್ಚಾಗಿರುತ್ತದೆ. ಆದರೆ ಈಗ ಮಾರುಕಟ್ಟೆಯಲ್ಲಿ ಕಳಪೆ ಗುಣಮಟ್ಟದ ಬೆಳ್ಳುಳ್ಳಿಗೆ ಸಹ ಕೆಜಿಗೆ 120 ರೂಪಾಯಿಗಳಾಗಿದೆ.


ಹಾಪ್ ಕಾಮ್ಸ್ ನ ವ್ಯವಸ್ಥಾಪಕ ನಿರ್ದೇಶಕ ಬಿ ಎನ್ ಪ್ರಸಾದ್ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಮಾಹಿತಿ ನೀಡಿ, ಕಳೆದ ಒಂದೂವರೆ ತಿಂಗಳಿನಿಂದ ಬೆಳ್ಳುಳ್ಳಿ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದೆ. ಈರುಳ್ಳಿ ಬೆಲೆ ಸಹ ಈ ಪ್ರಮಾಣದಲ್ಲಿ ಏರಿಕೆಯಾಗಿರಲಿಲ್ಲ. ಚಿಲ್ಲರೆ ಮಾರುಕಟ್ಟೆಯಲ್ಲಿ ಬೆಂಗಳೂರಿನಲ್ಲಿ ಈ ಹಿಂದೆ ಈರುಳ್ಳಿಗೆ 80 ರೂಪಾಯಿ ದಾಟಿರಲಿಲ್ಲ ಎಂದರು.


ಇತ್ತೀಚೆಗೆ ತರಕಾರಿ ಮಾರುಕಟ್ಟೆಯಲ್ಲಿ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ ಬೆಲೆ ಹೆಚ್ಚಾಗುತ್ತಿದೆ. ಆಲೂಗಡ್ಡೆ ಮತ್ತು ಟೊಮ್ಯಾಟೊ ಬೆಲೆ ಮಾತ್ರ ಸ್ಥಿರವಾಗಿದೆ. ಸದ್ಯ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಕೆಜಿಗೆ 54 ರೂಪಾಯಿ, ಆಲೂಗಡ್ಡೆಗೆ 29 ರೂಪಾಯಿ, ಶುಂಠಿಗೆ 200 ರೂಪಾಯಿ ಮತ್ತು ಟೊಮ್ಯಾಟೊಗೆ 34 ರೂಪಾಯಿ ಇದೆ.


ಕರ್ನಾಟಕದಲ್ಲಿ ಬೆಳ್ಳುಳ್ಳಿ ಹೆಚ್ಚು ಬೆಳೆಯುವುದಿಲ್ಲ. ಮಧ್ಯ ಪ್ರದೇಶದಿಂದ ತರಿಸಲಾಗುತ್ತದೆ. ಸೆಪ್ಟೆಂಬರ್ ಕೊನೆಯವರೆಗೆ ಏರಿಕೆಯಾಗಿದ್ದ ಈರುಳ್ಳಿ ಬೆಲೆ ಈಗ ಕಡಿಮೆಯಾಗುತ್ತಾ ಬಂದಿದೆ. ಈರುಳ್ಳಿ ಕರ್ನಾಟಕದಲ್ಲಿ ಕೂಡ ಬೆಳೆಯುತ್ತಾರೆ. ಮುಂದಿನ ದಿನಗಳಲ್ಲಿ ಈರುಳ್ಳಿ ಬೆಲೆ ಕಡಿಮೆಯಾಗುವ ಸಾಧ್ಯತೆಯಿದೆ. ಆಗ್ರಾದಿಂದ ತರಿಸುವ ಆಲೂಗಡ್ಡೆಯನ್ನು ಶೀತಲ ಘಟಕಗಳಲ್ಲಿ ಸಂಗ್ರಹಿಸಲಾಗುತ್ತದೆ. ಹಾಸನದಲ್ಲಿ ಬೆಳೆದ ಆಲೂಗಡ್ಡೆ ಮಾರುಕಟ್ಟೆಯಲ್ಲಿ ಸಿಗುತ್ತದೆ. 

ಕಳೆದೆರಡು ವಾರಗಳಿಂದ ತರಕಾರಿ ಬೆಲೆ ಏರಿಕೆಯಾಗಿದ್ದು ಇನ್ನೂ ಕಡಿಮೆಯಾಗಿಲ್ಲ. ಬೆಲೆ ಏರಿಕೆಗೂ ಹಬ್ಬಗಳಿಗೂ ಯಾವುದೇ ಸಂಬಂಧವಿಲ್ಲ. ಬದಲಾಗಿ ನಿರಂತರ ಮಳೆಯಿಂದಾಗಿ ತರಕಾರಿ ಬೆಳೆಗಳು ಕೊಳೆತು ಹಾಳಾಗಿ ಹೋಗುತ್ತಿರುವುದರಿಂದ ಪೂರೈಕೆಯಲ್ಲಿ ಕಡಿಮೆಯಾಗಿರುವುದರಿಂದ ಬೆಲೆ ಹೆಚ್ಚಳವಾಗಿದೆ. ಮಹಾರಾಷ್ಟ್ರ, ಉತ್ತರ ಕರ್ನಾಟಕ, ಬೆಂಗಳೂರು ಹೊರವಲಯಗಳಲ್ಲಿ ಸತತ ಮಳೆಯಿಂದಾಗಿ ತರಕಾರಿ ಬೆಳೆ ನಾಶವಾಗಿ ಹೋಗುತ್ತಿದೆ. ಇದರಿಂದಾಗಿ ಬೆಲೆ ಜಾಸ್ತಿಯಾಗಿದೆ ಎಂದು ಪ್ರಸಾದ್ ಹೇಳುತ್ತಾರೆ.


ಹಬ್ಬದ ಸಮಯದಲ್ಲಿ ತರಕಾರಿ ಮಾರಾಟಗಾರರು ಹೆಚ್ಚು ಲಾಭ ಮಾಡಿಕೊಳ್ಳಲು ನೋಡಿಕೊಳ್ಳುತ್ತಾರೆ. ತರಕಾರಿ ದಿನನಿತ್ಯ ಜನರಿಗೆ ಬೇಕು. ಹಬ್ಬದ ಸಮಯದಲ್ಲಿ 5ರಿಂದ 10 ರೂಪಾಯಿಗಳಷ್ಟು ಹೆಚ್ಚಾಗುತ್ತದೆ. ಇದು ದೊಡ್ಡ ಮೊತ್ತವಲ್ಲದಿದ್ದರೂ ನಮಗೆ ಸಾಕಾಗುತ್ತದೆ ಎಂದು ಇಂದಿರಾನಗರದ ತರಕಾರಿ ವ್ಯಾಪಾರಿ ಅಶ್ರಫ್ ಯು ಎಫ್ ಹೇಳುತ್ತಾರೆ.


ಕಳೆದೊಂದು ವಾರದಿಂದ ನನ್ನ ಬಳಿ ಪ್ರತಿದಿನ 30ರಿಂದ 50 ಗ್ರಾಹಕರು ಬರುತ್ತಾರೆ. ಹಬ್ಬಗಳ ಸಮಯದಲ್ಲಿ ಚೆನ್ನಾಗಿ ದುಡ್ಡು ಮಾಡಿಕೊಳ್ಳಬಹುದು. ಹಬ್ಬದ ಸಮಯದಲ್ಲಿ ದಿನಕ್ಕೆ 100ರಿಂದ 200ರಷ್ಟು ಲಾಭವಾಗುತ್ತದೆ. ಈ ವರ್ಷ ಹೆಚ್ಚು ಮಳೆಯಾಗುತ್ತಿರುವುದರಿಂದ ಗ್ರಾಹಕರ ಸಂಖ್ಯೆ ಕಡಿಮೆಯಾಗುತ್ತಿದೆ. ಗ್ರಾಹಕರು ದೊಡ್ಡ ಅಂಗಡಿಗಳಿಗೆ ಹೋಗುತ್ತಾರೆ ಎಂದು ಹಲಸೂರಿನ ತರಕಾರಿ ವ್ಯಾಪಾರ ಮಾಡುವ ಮಹಿಳೆ ಬೆವ್ಲುಾ ಅಮ್ಮ ಹೇಳುತ್ತಾರೆ.

SCROLL FOR NEXT