ರಾಜ್ಯ

ಹಳ್ಳಿಗಳ ಸ್ಥಳಾಂತರ ಕಾರ್ಯ ಆರಂಭ :ರೈತ ಮುಖಂಡರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಭರವಸೆ

Raghavendra Adiga

ಬೆಂಗಳೂರು: ನೆರೆ ಸಂತ್ರಸ್ಥರಿಗಾಗಿ ರಾಜ್ಯ ಸರ್ಕಾರ ಸಾಕಷ್ಟು ಪರಿಹಾರ ಯೋಜನೆಗಳನ್ನು ಘೋಷಣೆ ಮಾಡಿದ್ದು, ಇನ್ನಷ್ಟು ಕಾರ್ಯಕ್ರಮಗಳನ್ನು ಕೆಲವೇ ದಿನಗಳಲ್ಲಿ ಪ್ರಕಟಿಲಿದ್ದೇವೆ ಹಳ್ಳಿಗಳ ಸ್ಥಳಾಂತರ ಮಾಡಿ ಹೊಸ ಹಳ್ಳಿಗಳ ನಿರ್ಮಾಣ ಕಾರ್ಯದಲ್ಲಿ ಸರ್ಕಾರ ಕಾರ್ಯೋನ್ಮುಖವಾಗಿದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿ ತಮ್ಮನ್ನು ಭೇಟಿ ಮಾಡಿದ ರೈತ ಸಂಘದ ಮುಖಂಡರ ವಿವಿಧ ಬೇಡಿಕೆಗಳ ಮನವಿ ಪತ್ರ ಸ್ವೀಕರಿಸಿದ ಯಡಿಯೂರಪ್ಪ, ಮೈಕ್ರೋ ಫೈನಾನ್ಸ್ ಕಂಪನಿಗಳ ಹಾವಳಿಗೆ ಕೂಡಲೇ ಕಡಿವಾಣ ಹಾಕುತ್ತೇನೆ ಎಂದರು.

ನೆರೆ ಸಂತ್ರಸ್ತರಿಗೆ ಮೈಕ್ರೋ ಫೈನಾನ್ಸ್ ಸಂಸ್ಥೆಯವರು ನೋಟಿಸ್ ನೀಡಿದ್ದ ಹಿನ್ನೆಲೆಯಲ್ಲಿ ಕೂಡಲೇ ರಾಯಚೂರು ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿದ ಯಡಿಯೂರಪ್ಪ, ಕೂಡಲೇ ಸಾಲ‌ ಕೊಟ್ಟು ಕಿರುಕುಳ ನೀಡುವ ಕಂಪನಿಗಳ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಆದೇಶಿಸಿದರು.

ರೈತರ ಮೇಲೆ ದಾಖಲಿಸಿರುವ ಮೊಕದ್ದಮೆಗಳ ಬಗ್ಗೆ ವರದಿ ತರಿಸಲಾಗುತ್ತಿದ್ದು, ಮಾಹಿತಿ ಬಂದ ಕೂಡಲೇ ವಾಪಸ್ ತೆಗೆದುಕೊಳ್ಳುತ್ತೇವೆ. ರೈತರಿಗೆ ಅನ್ಯಾಯವಾಗುವುದನ್ನು ತಾವು ಸಹಿಸುವುದಿಲ್ಲ, ಅನ್ಯಾಯ ಆದರೆ ನೀವು ಯಾವಾಗ ಬೇಕಾದರೂ ನನಗೆ ಕರೆ ಮಾಡಿ ದೂರು ನೀಡಬಹುದು. ರೈತರ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸುತ್ತೇನೆ. ರೈತರಿಗೆ ಅನ್ಯಾಯ ಆಗಲು ತಮ್ಮ ಸರ್ಕಾರದಲ್ಲಿ ಎಂದೆಂದಿಗೂ ಅವಕಾಶ ನೀಡುವುದಿಲ್ಲ ಎಂದು ರೈತ ಮುಖಂಡರಿಗೆ ಭರವಸೆ ನೀಡಿದರು

ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆಯಿಂದ ರೈತ ಮುಖಂಡರಾದ ಬಸವರಾಜು ಹಾಗೂ ಸಮಾಜಿಕ ಹೋರಾಟಗಾರ ಟಿ ಜೆ ಅಬ್ರಾಹಂ ನೇತೃತ್ವದ ನಿಯೋಗ ಮುಖ್ಯಮಂತ್ರಿಗಳನ್ನು ಭೇಟಿ‌ ಮಾಡಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡರು ಪ್ರವಾಹದಿಂದ ಹಾನಿಗೀಡಾದ ರೈತರಿಗೆ ಹೆಚ್ಚಿನ ಪರಿಹಾರ ನೀಡುವ ಜತೆಗೆ ತಮ್ಮ ಹಲವು ಬೇಡಿಕಗಳನ್ನು ಈಡೇರಿಸಬೇಕೆಂದು ಮುಖ್ಯಮಂತ್ರಿ ಅವರಿಗೆ ಬೇಡಿಕೆ ಪತ್ರ ಸಲ್ಲಿಸಿದರು.

* ರಾಜ್ಯದಲ್ಲಿ 14,81,473 ಎಕರೆ ಪ್ರದೇಶದಲ್ಲಿ ಬೆಳೆ ನಷ್ಟವಾಗಿದ್ದು, ಈ ಪ್ರದೇಶದಲ್ಲಿ ಬೆಳೆದಿರುವ ಕಬ್ಬು, ಮೆಕ್ಕೆಜೋಳ, ಸೋಯಾ ಬೀನ್ ಹೆಸರು, ಜೋಳ, ರಾಗಿ ಸೇರಿದಂತೆ ಇತರೆ ಬೆಳೆಗಳು ಹಾಳಾಗಿದ್ದು ರೈತರ ಬದುಕು ಸಂಕಷ್ಟದಲ್ಲಿದೆ. ಹಾಗಾಗಿ ಇವರಿಗೆ ಗುಣಮಟ್ಟದ ಜೀವನ ಸಾಗಿಸಲು ಅನುಕೂಲವಾಗುವಂತೆ 400 ಹಳ್ಳಿಗಳನ್ನು ಸ್ಥಳಾಂತರ ಮಾಡಿ ಹೊಸದಾಗಿ ಹಳ್ಳಿಗಳನ್ನು‌ನಿರ್ಮಾಣ ಮಾಡಿ ಮನೆ ಕಳೆದುಕೊಂಡ ‌ಕುಟುಂಬಗಳಿಗೆ 10 ಲಕ್ಷಕ್ಕೂ ಕಡಿಮೆಯಿಲ್ಲದಂತೆ ಉತ್ತಮ‌ ಪರಿಹಾರ ನೀಡಬೇಕು, ಗುಣಮಟ್ಟದ ಮನೆ ನಿರ್ಮಾಣ ಮಾಡಿ‌ ಕೊಡಬೇಕು.
* ಕೃಷಿ ಭೂಮಿಯಲ್ಲಿ ದೊಡ್ಡ ದೊಡ್ಡ ಕಂದಕಗಳು ನಿರ್ಮಾಣವಾಗಿದ್ದು ಇವುಗಳನ್ನು ಸರಿಪಡಿಸಲು ಲಕ್ಷಾಂತರ ರೂಪಾಯಿಗಳು ಖರ್ಚಾಗಲಿದೆ. ಇದನ್ನು ಸರ್ಕಾರದಿಂದ ಸರಿಪಡಿಸುವ ಕೆಲಸ ಆಗಬೇಕು.
* ನೆರೆ ಸಂತ್ರಸ್ತ ಕುಟುಂಬಕ್ಕೆ ಅವರ ಜೀವನ ನಿರ್ವಹಣೆ, ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಮತ್ತೆ ಸಾಮಾಗ್ರಿಗಳನ್ನು ಹಾಗೂ ಬಟ್ಟೆಗಳನ್ನು ಕೊಳ್ಳಳೂ ಕನಿಷ್ಠ 25 ಸಾವಿರ ರೂಪಾಯಿಗಳನ್ನು ತಕ್ಷಣಕ್ಕೆ ನೀಡಬೇಕು.
* ಪ್ರವಾಹದಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ 25 ಲಕ್ಷ ರೂಪಾಯಿ ಪರಿಹಾರ ನೀಡಬೇಕು.
* ನದಿ‌ ಪ್ರದೇಶ ಬಿಟ್ಟು ಪಕ್ಕದಲ್ಲೇ ಬರಗಾಲ ಮುಂದುವರೆದಿದ್ದು, ಬರ ಪರಿಹಾರ ಮೊತ್ತವನ್ನು ಕೂಡಲೇ ಬಿಡುಗಡೆ ಮಾಡಬೇಕು.
* ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಮೈಕ್ರೋ ಪೈನಾನ್ಸ್ ಕಂಪನಿಗಳು ಗಂಜಿ ಕೇಂದ್ರಗಳಿಗೆ ಹೋಗಿ ಹಣ ವಸೂಲಿಗೆ ಮುಂದಾಗಿದ್ದು ಅವುಗಳ ವಿರುದ್ದ ಕ್ರಮ‌ಕೈಗೊಳ್ಳಬೇಕು.
* ಕಾವೇರಿ ನದಿ‌ ನಿರ್ವಹಣಾ ಮಂಡಳಿ ರೀತಿ‌ ಕೃಷ್ಣಾ ನದಿ ನಿರ್ವಹಣ ಪ್ರಾಧಿಕಾರ ರಚನೆ ಮಾಡಿದರೆ ನೀರನ್ನು ಯಾವಾಗ‌ ಬಿಡಬೇಕು ಯಾವಾಗ ಬಿಡಬಾರದು ಎನ್ನುವ ತೀರ್ಮಾನ ಮಾಡಿದರೆ ಪ್ರವಾಹ ಪರಿಸ್ಥಿತಿ ತಡೆಗಟ್ಟಬಹುದು.
* ರೈತರ ಸಾಲ ಮನ್ನಾ ಕಾರ್ಯಕ್ರಮ ಘೋಷಣೆ ಮಾಡಬೇಕು, ಮಹಿಳಾ ಸ್ವಸಹಾಯ ಸಂಘದ ಸಾಲ‌ಮನ್ನಾ ಮಾಡಬೇಕು.
* ನೀರಾ ಮಂಡಳಿ ಸ್ಥಾಪನೆ‌ ಮಾಡಬೇಕು, ನೈಸ್ ಕಂಪನಿಯಲ್ಲಿ ರೈತರಿಗೆ ಆದ ಅನ್ಯಾಯ ಸರಿ ಮಾಡಬೇಕು
* ಯಶಸ್ವಿನಿ ಯೋಜನೆ ಮತ್ತೆ ಜಾರಿಗೆ ತರಬೇಕು,ರೈತರ ಮೇಲಿನ‌ ಪ್ರಕರಣಗಳನ್ನು ವಾಪಸ್ ಪಡೆಯಬೇಕು

SCROLL FOR NEXT