ಆರೋಗ್ಯ ಸಹಾಯಕರಿಗೆ ವೇತನ ಬಿಡುಗಡೆ ಮಾಡಿ: ಆಯನೂರು ಮಂಜುನಾಥ್
ಕೊರೋನಾ ಸೋಂಕಿಗೆ ಒಳಗಾಗಿರುವವರ ಶುಶ್ರೂಷೆ ಮಾಡುತ್ತಿರುವ ಆರೋಗ್ಯ ಸಹಾಯಕರಿಗೆ ಆದಷ್ಟು ಬೇಗ ವೇತನ ಬಿಡುಗಡೆ ಮಾಡುವಂತೆ ಮಾಜಿ ಸಂಸದ, ಮೇಲ್ಮನೆಯ ಬಿಜೆಪಿ ಸದಸ್ಯ ಆಯನೂರು ಮಂಜುನಾಥ್ ಆರೋಗ್ಯ ಸಚಿವ ಶ್ರೀರಾಮುಲು ಅವರನ್ನು ಒತ್ತಾಯಿಸಿದ್ದಾರೆ.
ಶಿವಮೊಗ್ಗ: ಕೊರೋನಾ ಸೋಂಕಿಗೆ ಒಳಗಾಗಿರುವವರ ಶುಶ್ರೂಷೆ ಮಾಡುತ್ತಿರುವ ಆರೋಗ್ಯ ಸಹಾಯಕರಿಗೆ ಆದಷ್ಟು ಬೇಗ ವೇತನ ಬಿಡುಗಡೆ ಮಾಡುವಂತೆ ಮಾಜಿ ಸಂಸದ, ಮೇಲ್ಮನೆಯ ಬಿಜೆಪಿ ಸದಸ್ಯ ಆಯನೂರು ಮಂಜುನಾಥ್ ಆರೋಗ್ಯ ಸಚಿವ ಶ್ರೀರಾಮುಲು ಅವರನ್ನು ಒತ್ತಾಯಿಸಿದ್ದಾರೆ.
ಶನಿವಾರ ಸಂಜೆ ಶಿವಮೊಗ್ಗ ಜಿಲ್ಲೆಯ ಮೆಗ್ಗಾನ್ ಆಸ್ಪತ್ರೆ ಸೇರಿದಂತೆ ವಿವಿಧ ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡಿದ ಅವರು, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರೋಗ್ಯ ಸಹಾಯಕ, ಸಹಾಯಕಿಯರು ಅಳಲು ತೋಡಿಕೊಂಡಿದ್ದು, ಕಳೆದ ಮೂರು ತಿಂಗಳಿನಿಂದ ವೇತನ ಬಿಡುಗಡೆಯಾಗಿಲ್ಲ. ಮಹಾಮಾರಿ ಕೊರೊನಾ ವೈರಸ್ ರೋಗ ಹೆಚ್ಚುತ್ತಿರುವ ಪ್ರಸಕ್ತ ಸಂದರ್ಭದಲ್ಲಿ ಆರೋಗ್ಯ ಸಹಾಯಕರು ಹಗಲು-ರಾತ್ರಿ ಎನ್ನದೇ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.
ಇವರಲ್ಲಿ ಅದೆಷ್ಟೋ ಸಹಾಯಕರು ಮನೆಗೂ ಹೋಗದೇ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ. ಸಂಕಷ್ಟದ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಕೈಹಿಡಿದಿರುವ ಆರೋಗ್ಯ ಸಹಾಯಕರಿಗೆ ಕಳೆದ ಮೂರು ತಿಂಗಳಿನಿಂದ ವೇತನ ಬಿಡುಗಡೆಯಾಗದಿರುವುದು ವಿಷಾದನೀಯ. ಇದು ಕೇವಲ ಶಿವಮೊಗ್ಗ ಸರ್ಕಾರಿ ಆಸ್ಪತ್ರೆಗಳ ಸಹಾಯಕರ ಅಳಲಷ್ಟೇ ಆಗಿರದೇ ರಾಜ್ಯದ ಹಲವು ಆಸ್ಪತ್ರೆಗಳ ಸಹಾಯಕರ ನೋವು ಸಹ ಆಗಿದೆ ಎಂದು ಹೇಳಿದ್ದಾರೆ.
ಆದ್ದರಿಂದ ಸರ್ಕಾರದ ಆರ್ಥಿಕ ಇಲಾಖೆಯಿಂದ ಆರೋಗ್ಯ ಸಹಾಯಕರಿಗೆ ಬಿಡುಗಡೆಯಾಗಬೇಕಿರುವ ವೇತನವನ್ನು ಬಿಡುಗಡೆಗೊಳಿಸುವಂತೆ ಆಯನೂರು ಮಂಜುನಾಥ್ ಮನವಿ ಮಾಡಿದ್ದಾರೆ.