ರಾಜ್ಯ

ವೈರಸ್'ಗಿಂತಲೂ ಸಾಮಾಜಿಕ ಬಹಿಷ್ಕಾರ ಜನರನ್ನು ಹೆಚ್ಚು ಆತಂಕಕ್ಕೊಳಗಾಗುವಂತೆ ಮಾಡುತ್ತಿದೆ: ವೈದ್ಯರು

Manjula VN

ಬೆಂಗಳೂರು: ವೈರಸ್ ಗಿಂತಲೂ ಸಾಮಾಜಿಕ ಬಹಿಷ್ಕಾರ, ಕಳಂಕದ ಭಯವೇ ಜನರನ್ನು ಹೆಚ್ಚು ಆತಂಕಕ್ಕೀಡು ಮಾಡಿದ್ದು, ಇದರಿಂದ ಪರೀಕ್ಷೆಗೊಳಪಡಲು ಜನರು ಮುಂದಕ್ಕೆ ಬರುತ್ತಿಲ್ಲ ಎಂದು ವೈದ್ಯರು ಹೇಳಿದ್ದಾರೆ. 

ಕೊರೋನಾ ಪರೀಕ್ಷೆ ಬಳಿಕ ವೈದ್ಯಕೀಯ ವರದಿ ಪಾಸಿಟಿವ್ ಬಂದರೆ ಸಮಾಜದಿಂದ ಎದುರಿಸಬೇಕಾದ ಪರಿಸ್ಥಿತಿಗಳಿಗೆ ಹೆದರುತ್ತಿರುವ ಜನರು ಪರೀಕ್ಷೆಗೊಳಪಡಲು ನಿರಾಕರಿಸುತ್ತಿದ್ದಾರೆಂದು ಕರ್ನಾಟಕ ಶ್ವಾಸಕೋಶಶಾಸ್ತ್ರಜ್ಞರುಗಳ ಸಂಘದ ಅಧ್ಯಕ್ಷ ಡಾ. ಕೆ ಎಸ್ ಸತೀಶ್ ಅವರು ಹೇಳಿದ್ದಾರೆ. 

ಸೋಂಕಿತರ ಮನೆಗಳನ್ನು ಸೀಲ್ ಮಾಡುವುದು, ರಸ್ತೆಗಳಿಗೆ ಬ್ಯಾರಿಕೇಡ್ ಹಾಕುವುದು, ರೆಡ್ ಪೋಸ್ಟರ್ ಗಳನ್ನು ಅಂಟಿಸುವ ಪ್ರಕ್ರಿಯೆ ನಮ್ಮ ದೇಶದಲ್ಲಿ ಬಿಟ್ಟರೆ ಬೇರಾವುದೇ ರಾಷ್ಟ್ರಗಳಲ್ಲಿಯೂ ಇಲ್ಲ. ಜನರು ಜವಾಬ್ದಾರಿಯುತವಾಗಿ ವರ್ತಿಸಬೇಕು. ಪರೀಕ್ಷೆಗೊಳಪಡಲು ಹಿಂಜರಿಯಬಾರದು. ಜನರು ಆತಂಕಕ್ಕೊಳಗಾಗಬಾರದು. ಇದೇನು ಪ್ರಾಣ ತೆಗೆಯುವ ವೈರಸ್ ಅಲ್ಲ. ವಿಶ್ವದ ಇತರೆ ರಾಷ್ಟ್ರಗಳಿಗೆ ಹೋಲಿಕೆ ಮಾಡಿದರೆ, ಭಾರತದಲ್ಲಿ ಗುಣಮುಖರಾಗುತ್ತಿರುವ ಸಂಖ್ಯೆ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ. 

ಮಹಾಲಕ್ಷ್ಮಿ ಲೇಔಟ್-ರಾಜಾಜಿನಗರದ ಕೊರೋನಾ ವಾರಿಯರ್ಸ್ ಮಾತನಾಡಿ, ತಂದೆ ಹಾಗೂ ತಾಯಿ ಇಬ್ಬರಿಗೂ ಕೊರೋನಾ ವೈರಸ್ ದೃಢಪಟ್ಟಿದೆ. ಬಿಬಿಎಂಪಿ ಅಧಿಕಾರಿಗಳು ಮನೆಯನ್ನು ಸೀಲ್ಡೌನ್ ಮಾಡಿದ್ದಾರೆ. ನಾನೂ ಕೂಡ ಪರೀಕ್ಷೆಗೊಳಗಾಗಿದ್ದು, ವೈದ್ಯಕೀಯ ವರದಿಯಲ್ಲಿ ವೈರಸ್ ಇಲ್ಲ ಎಂದು ತಿಳಿದುಬಂದಿದೆ. ಆಸ್ಪತ್ರೆಗೆ ಹೋಗಲು ಭಾರೀ ಕಷ್ಟವಾಗುತ್ತಿದೆ. ಬಿಬಿಎಂಪಿ ಮನೆ ರಸ್ತೆಗೆ ಬ್ಯಾರಿಕೇಡ್ ಹಾಕಿದೆ. ನಾನು ಮನೆಯಿಂದ ಹೊರಗೆ ಕಾರು ತೆಗೆಯಲು ಆಗುತ್ತಿಲ್ಲ. ಹೀಗಾಗಿ ಸಾರ್ವಜನಿಕ ಸಾರಿಗೆ ವಾಹನವನ್ನೇ ಬಳಸಬೇಕಾಗಿದೆ. ಅಪಾಯವನ್ನು ತಲೆ ಮೇಲೆ ಎಳೆದುಕೊಳ್ಳಲು ನನಗಿಷ್ಟವಿಲ್ಲ ಇದೀಗ ನಾನು ಪೋಷಕರನ್ನು ಆಸ್ಪತ್ರೆಗೆ ದಾಖಲು ಮಾಡುತ್ತಿದ್ದೇನೆಂದು ಹೇಳಿದ್ದಾರೆ. 

ರಸ್ತೆಗೆ ಬ್ಯಾರಿಕೇಡ್ ಹಾಗುವುದು ಅವೈಜ್ಞಾನಿಕವಾದದ್ದು. ವಾರ್ಡ್ ಆರೋಗ್ಯಾಧಿಕಾರಿಯೊಂದಿಗೆ ಮಾತನಾಡಿದರೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ ಅಡಿಯಲ್ಲಿ ನಿಯಮವನ್ನು ಪಾಲನೆ ಮಾಡಲಾಗುತ್ತಿದೆ. ನಿಯಮಕ್ಕೆ ನಾವೆಲ್ಲರೂ ತಲೆ ಬಾಗಲೇಬೇಕಿದೆ ಎಂದಿದ್ದಾರೆಂದು ತಿಳಿಸಿದ್ದಾರೆ. 

"ಜೀವಮಾನದ ಕಾಯಿಲೆ ಹಾಗೂ ನೈತಿಕತೆಗೆ ಕಳಂಕ ತರುವ ಎಚ್ಐವಿ ಪರೀಕ್ಷೆ ಮಾಡಿಸಿಕೊಳ್ಳಲು ಜನರು ಹಿಂಜರಿಯುತ್ತಿಲ್ಲ. ಆದರೆ, ಕೋವಿಡ್ -19 ಪರೀಕ್ಷೆ ಮಾಡಿಸಿಕೊಳ್ಳಲು ಹೆದರುತ್ತಿದ್ದಾರೆಂದು ಖ್ಯಾತ ರೋಗನಿರೋಧಕ ಮತ್ತು ಸಂಧಿವಾತ ತಜ್ಞ ಡಾ.ಚಂದ್ರಶೇಖರ್ ಎಸ್ ಹೇಳಿದ್ದಾರೆ. 

ಇಂತಹ ಮನಸ್ಥಿತಿಗಳು ದೂರಾಗಬೇಕಿದೆ. ಜನರ ಆತಂಕವನ್ನು ಸರ್ಕಾರ ದೂರಾಗಿಸಬೇಕು. ಪರೀಕ್ಷೆಗೊಳಗಾಗಲು ಜನರಿಗೆ ಪ್ರೋತ್ಸಾಹ ನೀಡಬೇಕು. ಪರೀಕ್ಷೆ ಶೀಘ್ರಗತಿಯಲ್ಲಿ ಮಾಡಿಸಿಕೊಂಡಷ್ಟು ಸೋಂಕು ಹರಡುವುದು ಕಡಿಮೆಯಾಗುತ್ತದೆ. ಬಿಬಿಎಂಪಿ ಅಧಿಕಾರಿಗಳು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಪರೀಕ್ಷೆ ತಡವಾದಷ್ಟು ಸಾವಿನ ಸಂಖ್ಯೆ ಹೆಚ್ಚಾಗುತ್ತದೆ ಎಂದು ಡಾ.ಸತೀಶ್ ಅವರು ತಿಳಿಸಿದ್ದಾರೆ. 

SCROLL FOR NEXT