ರಾಜ್ಯ

ಮಂಗಳೂರು ದೋಣಿ ದುರಂತ: 4 ಮೀನುಗಾರರ ಮೃತದೇಹ ಪತ್ತೆ, ಒಂದು ಮರಳಿ ಸಮುದ್ರಕ್ಕೆ, ಮುಂದುವರೆದ ಕಾರ್ಯಾಚರಣೆ

Manjula VN

ಮಂಗಳೂರು: ಮಂಗಳೂರು ಅರಬ್ಬೀ ಸಮುದ್ರದಲ್ಲಿ ಮಂಗಳವಾರ ಬೋಟ್ ಮುಳುಗಿ ನಾಪತ್ತೆಯಾದ ನಾಲ್ವರು ಮೃತದೇಹ ಬುಧವಾರ ಪತ್ತೆಯಾಗಿದೆ. ಆದರೆ, ಓರ್ವನ ಮೃತದೇಹ ಮರಳಿ ಸಮುದ್ರ ಸೇರಿದ್ದು, ಈ ಮೃತದೇಹಕ್ಕಾಗಿ ಮತ್ತೆ ಹುಡುಕಾಟ ಮುಂದುವರೆದಿದೆ. ಎಲ್ಲಾ ಆರು ಮಂದಿಯ ಮೃತದೇಹ ಪತ್ತೆಯಾದರೂ ಒಂದು ಮೃತದೇಹ ಮರಳಿ ಸಮುದ್ರ ಸೇರಿದ ಕಾರಣ ಓರ್ವನ ವಿಚಾರದಲ್ಲಿ ಅನಿಶ್ಛಿತತೆ ಮುಂದುವರಿದಂತಾಗಿದೆ. 

ಬೋಟು ಮುಳುಗಿದ ಘಟನೆ ಸಂಭವಿಸಿದ ಮಂಗಳವಾರ ಆರು ಮಂದಿ ನಾಪತ್ತೆಯಾದವರಲ್ಲಿ ಇಬ್ಬರ ಮೃತದೇಹ ಪತ್ತೆಯಾಗಿತ್ತು. ಉಳಿದ ನಾಲ್ವರು ಕೂಡ ಶವವಾಗಿ ಪತ್ತೆಯಾಗಿದ್ದಾರೆ. 

ಕಸಬಾ ಬೆಂಗರೆ ನಿವಾಸಿ ಹಸೈನಾರ್ (28), ಚಿಂತನ್ (21), ಜಿಯಾವುಲ್ಲಾ (36) ಮತ್ತು ಅನ್ಸಾರ್ ಇವರ ಮೃತದೇಹ ಬುಧವಾರ ಪತ್ತೆಯಾಗಿದೆ. ಇವರಲ್ಲಿ ಅನ್ಸಾರ್ ಮೃತದೇಹ ಬಲೆಯಲ್ಲಿ ಪತ್ತೆಯಾಗಿದ್ದು, ಅದನ್ನು ಹೊರಗೆ ತರುವಾಗ ಮರಳಿ ಸಮುದ್ರ ಪಾಲಾಗಿದೆ ಎಂದು ಹೇಳಲಾಗುತ್ತಿದೆ. ಆದ್ದರಿಂದ ಈ ಮೃತದೇಹದ ಕುರಿತು ಅನಿಶ್ಚಿತತೆ ಮೂಡಿದಂತಾಗಿದೆ. ನಾಪತ್ತೆಯಾದವರಲ್ಲಿ ಪಾಂಡುರಂಗ ಮತ್ತು ಪ್ರೀತಂ ಎಂಬುವವರ ಮೃತದೇಹ ಮಂಗಳವಾರವೇ ಪತ್ತೆಯಾಗಿತ್ತು. 

ಈ ನಾಲ್ವರ ಶವ ಬೋಟು ಮುಳುಗಿದ ಸಮೀಪವೇ ಪತ್ತೆಯಾಗಿದೆ. ಇವರ ಶವ ಮೀನಿನ ಬಲೆಗೆ ಸಿಲುಕಿದ್ದು, ಇವರು ಬಲೆಯಿಂದ ಹೊರಬರಲಾಗದೆ ಮೃತಪಟ್ಟಿರುವ ಸಾಧ್ಯತೆ ಇದೆ. ಶವದ ಚರ್ಮ ಕಿತ್ತುಹೋಗಿದ್ದು, ಗುರುತು ಪತ್ತೆಗೆ ಅಸಾಧ್ಯವಾದಷ್ಟು ಮೃತದೇಹ ವಿರೂಪಗೊಂಡಿತ್ತು. ಈ ಶವ ಕಡಲಿನಲ್ಲಿ ಮೀನುಗಳಿಗೆ ಆಹಾರವಾಗಿರುವ ಶಂಕೆಯಿದೆ. ಕೋಸ್ಟ್ ಗಾರ್ಡ್ ಹಾಗೂ ತಣ್ಣೀರು ಬಾವು ಮುಳುಗುತಜ್ಞರ ತಂಡ ಶೋಧ ಕಾರ್ಯಾಚರಣೆ ನಡೆಸಿ ಶವಗಳನ್ನು ಪತ್ತೆ ಮಾಡಿತ್ತು. ಮೃತದೇಹಗಳನ್ನು ನಗರದ ವೆನ್ಲಾಕ್ ಆಸ್ಪತ್ರೆ ಶವಾಗಾರದಲ್ಲಿ ಇರಿಸಲಾಗಿತ್ತು. ಬಳಿಕ ಮರಣೋತ್ತರ ಪರೀಕ್ಷೆ ನಡೆಸಿ ಶವಗಳನ್ನು ವಾರಸುದಾರ ಕುಟುಂಬಕ್ಕೆ ಹಸ್ತಾಂತರಿಸಲಾಯಿತು. 

ಸೋಮವಾರ ಮೀನುಗಾರಿಕೆಗೆ ತೆರಳಿದ ಶ್ರೀರಕ್ಷಾ ಹೆಸರಿನ ಬೋಟ್'ನಲ್ಲಿ ಒಟ್ಟು 25 ಮಂದಿ ಮೀನುಗಾರರಿದ್ದರು. ರಾತ್ರಿ ವೇಳೆ ಅವಘಡ ಸಂಭವಿಸಿದ್ದು, ಬೋಟ್ ನಲ್ಲಿದ್ದವರ ಪೈಕಿ 19 ಮಂದಿ ಹೊರಗೆ ಜಿಗಿದು ಪಾರಾದರೆ, 6 ಮಂದಿ ನಾಪತ್ತೆಯಾಗಿದ್ದರು.

ಮೃತರ ಕುಟುಂಬಕ್ಕೆ ತಲಾ ರೂ.6 ಲಕ್ಷ ಪರಿಹಾರ ಘೋಷಣೆ
ಬೋಟ್ ಮುಳುಗಿದ ಘಟನೆಯಲ್ಲಿ ಮೃತಪಟ್ಟವರ ಕುಟುಂಬಕ್ಕೆ ಜಿಲ್ಲಾಡಳಿತ ನಿಯಮದಂತೆ ತಲಾ ರೂ.6 ಲಕ್ಷ ಪರಿಹಾರ ಪ್ರಕಟಿಸಿದೆ. 

ಜಿಲ್ಲಾಧಿಕಾರಿ ಡಾ.ರಾಜೇಂದ್ರ ಅವರು ಮಂಗಳವಾರ ರಾತ್ರಿ ಹಳ ಬಂದರು ಧಕ್ಕೆಗೆ ಭೇಟಿ ನೀಡಿ ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಅಲ್ಲದೆ, ಶೋಧ ಕಾರ್ಯಾಚರಣೆಗೆ ವೇಗ ನೀಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಕೂಡ ಬುಧವಾರ ಬಂದರು ಧಕ್ಕೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. 

ರೂ.6 ಲಕ್ಷಕ್ಕಿಂತ ಹೆಚ್ಚಿನ ಪರಿಹಾರ ಮೊತ್ತ ನೀಡುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಜೊತೆ ಮಾತುಕತೆ ನಡೆಸುವುದಾಗಿ ಭರವಸೆ ನೀಡಿದ್ದಾರೆ. ಶಾಸಕರಾದ ವೇದವ್ಯಾಸ ಕಾಮತ್, ಡಾ.ಭರತ್ ಶೆಟ್ಟಿ, ಮೀನುಗಾರಿಕಾ ಅಭಿವೃದ್ಧಿ ನಿಗಮ ಅಧ್ಯಕ್ಷ ನಿತಿನ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಈ ಮಧ್ಯೆ ಬೋಟು ಮುಳುಗಿ ಮೃತಪಟ್ಟವರ ಕುಟುಂಬಕ್ಕೆ ಕನಿಷ್ಟ ರೂ.25 ಪರಿಹಾರ ನೀಡುವಂತೆ ಡಿವೈಎಫ್ಎ ಘಟಕ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ. 

ಘಟನೆ ಕುರಿತು ಬೋಟ್'ನಿಂದ ಪಾರಾಗಿ ದಡ ಸೇರಿದ ಬೆಂಗರೆ ನಿವಾಸಿ ನಿಜಾಮುದ್ದೀನ್ ಎಂಬುವವರು ಮಾತನಾಡಿ, ಸೋಮವಾರ ಬೆಳಗ್ಗೆ 6 ಗಂಟೆಗೆ ಶ್ರೀರಕ್ಷಾ ಬೋಟ್'ನಲ್ಲಿ ನಾವು ಒಟ್ಟು 25 ಮಂದಿ ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದೆವು. ಮೀನುಗಾರಿಕೆ ಮುಗಿಸಿ ರಾತ್ರಿ ವಾಪಸ್ ಹೊರಟೆವು. ಸಂಜೆ 7 ಗಂಟೆ ಸುಮಾರಿಗೆ ಡಿಂಗಿ ಎಳೆಯುವಾಗ ಎಂಜಿನ್'ನ ಎಕ್ಸಲೇಟರ್ ಹೆಚ್ಚು ಮಾಡುವಂತೆ ಬೋಟ್ ಚಾಲಕನಿಗೆ ಹೇಳಿದ್ದೆ. ಅಷ್ಟರಲ್ಲಿ ಬೋಟ್ ಪೂರ್ತಿ ಬಲಗಡೆಗೆ ವಾಲಿತು. ನಾವು ಹಲವು ಮಂದಿ ಕ್ಯಾಬಿನ್'ನಲ್ಲಿ ಇದ್ದೆವು. 

ಕೂಡಲೇ ಬೋಟ್'ನಲ್ಲಿ ಇದ್ದವರು ನೀರಿಗೆ ಜಿಗಿದರು. ನೋಡುತ್ತಿದ್ದಂತೆಯೇ ಬೋಟ್ ಪಲ್ಟಿಯಾಯಿತು. ನಾವು ಕೂಡಲೇ ಸಮುದ್ರಕ್ಕೆ ಜಿಗಿದು ಡಿಂಗಿಯನ್ನು ಹಿಡಿದುಕೊಂಡು ಉಳಿದವರೂ ಅದರಲ್ಲಿ ಸೇರಿಕೊಂಡರು. ತಕ್ಷಣವೇ ಹಗ್ಗವನ್ನು ತುಂಡರಿಸಿ ಡಿಂಗಿಯನ್ನು ಬೋಟ್'ನಿಂದ ಬೇರ್ಪಡಿಸಿದೆವು. ಇದರಿಂದಾಗಿ ಡಿಂಗಿಯಲ್ಲಿದ್ದ ನಾವು 19 ಮಂದಿಯ ಪ್ರಾಣ ಉಳಿಯಿತು. ಗಟ್ಟಿಯಾದ ಹಗ್ಗವನ್ನು ಅಲ್ಲೇ ಇದ್ದ ಚಾಕುವಿನಿಂದ ನಾನು, ಇಜಾಝ್ ಹಾಗೂ ಶರಾಫತ್ ಸೇರಿ ತುಂಡರಿಸಿದ ಕಾರಣ ನಾವು ಬದುಕುಳಿದೆವು ಎಂದು ಹೇಳಿದ್ದಾರೆ. 

SCROLL FOR NEXT