ರಾಜ್ಯ

ಭಾರತಕ್ಕೆ ರೂಪಾಂತರಿ ಕೊರೋನಾ ವೈರಸ್ ಪ್ರವೇಶ: ಶಾಲೆ ಆರಂಭ ಹಿನ್ನೆಲೆ ಪೋಷಕರಲ್ಲಿ ಆತಂಕ

Manjula VN

ಬೆಂಗಳೂರು: ಭಾರತದಲ್ಲಿ ನಿಧಾನಗತಿಯಲ್ಲಿ ರೂಪಾಂತರಿ ಕೊರೋನಾ ವೈರಸ್ ತಲೆ ಎತ್ತುತ್ತಿದ್ದು, ಈ ನಡುವಲ್ಲೇ ಜನವರಿ 1 ರಿಂದ ರಾಜ್ಯ ಸರ್ಕಾರ ಶಾಲೆಗಳನ್ನು ಪುನರಾರಂಭಿಸಲು ನಿರ್ಧಾರ ಕೈಗೊಂಡಿರುವ ಹಿನ್ನೆಲೆಯಲ್ಲಿ ಪೋಷಕರು ಆತಂಕಕ್ಕೊಳಗಾಗಿದ್ದಾರೆ. 

ಬ್ರಿಟನ್ ನಲ್ಲಿ ರೂಪಾಂತರಿ ಕೊರೋನಾ ತಾಂಡವವಾಡಲು ಆರಂಭಿಸಿದ್ದು, ಬ್ರಿಟನ್ ನಿಂದ ಭಾರತಕ್ಕೆ ಬಂದಿರುವ 7 ಮಂದಿಯಲ್ಲಿ ಕೊರೋನಾ ಪತ್ತೆಯಾಗಿರುವುದು ಭಾರತದಲ್ಲಿ ಆತಂಕ ಹೆಚ್ಚಾಗುವಂತೆ ಮಾಡಿದೆ. 

ಈ ಬೆಳವಣಿಗೆ ನಡುವಲ್ಲೇ ಹೇಳಿಕೆ ನೀಡಿರುವ ಸರ್ಕಾರ, ಕೊರೋನಾ ಹೊಸ ಪ್ರಭೇದ ಬ್ರಿಟನ್ ನಲ್ಲಿ ಪತ್ತೆಯಾಗಿದೆ. ನಮ್ಮ ರಾಜ್ಯದಲ್ಲಿ ಈ ವರೆಗೂ ಪತ್ತೆಯಾಗಿಲ್ಲ. ಬ್ರಿಟನ್ ನಿಂದ ಬಂದಿರುವ ಎಲ್ಲರನ್ನೂ ಪರೀಕ್ಷೆಗೊಳಪಡಿಸುತ್ತಿದ್ದೇವೆ. ಒಂದೊಮ್ಮೆ ವೈರಾಣು ರಾಜ್ಯದಲ್ಲೂ ಕಂಡು ಬಂದರೆ ವೇರವಾಗಿ ಹರಡುವ ಲಕ್ಷಣ ಇರುವುದರಿಂದ ಶಾಲೆಗಳನ್ನು ಆರಂಭಿಸುವ ನಿರ್ಧಾರತ ಕುರಿತು ಪುನರ್ ಪರಿಶೀಲಿಸಲಾಗುತ್ತದೆ. ಇದಕ್ಕೆ ಇನ್ನೂ 10 ದಿನಗಳ ಕಾಲಾವಕಾಶವಿದ್ದು, ಸದ್ಯದಲ್ಲೇ ಕೊರೋನಾ ತಾಂತ್ರಿಕ ಸಲಹಾ ಸಮಿತಿ ಸಭೆ ನಡೆಸಿ ಸಮಿತಿಯ ಅಭಿಪ್ರಾಯವನ್ನು ಪಡೆಯಲಾಗುತ್ತದೆ ಎಂದು ಹೇಳಿದೆ. 

ರೂಪಾಂತರಿ ಕೊರೋನಾ ಕುರಿತು ಇದೀಗ ಪೋಷಕರು ಆತಂಕ ವ್ಯಕ್ತಪಡಿಸಲು ಆರಂಭಿಸಿದ್ದು, ಶಾಲೆಗಳ ಪುನರಾರಂಭಿಸುವ ನಿರ್ಧಾರದಿಂದ ಸರ್ಕಾರ ಹಿಂದಕ್ಕೆ ಸರಿಯುವುದು ಒಳ್ಳೆಯದು ಎಂದು ಹೇಳುತ್ತಿದ್ದಾರೆ. 

ಸಿಬಿಎಸ್ ಬೋರ್ಡ್ ಶಾಲೆಯಲ್ಲಿ 9ನೇ ತರಗತಿ ಓದುತ್ತಿರುವ ವಿದ್ಯಾರ್ಥಿನಿಯ ತಾಯಿ ಚಂದ್ರಮುಖಿ ಎಂಬುವವರು ಹೇಳಿಕೆ ನೀಡಿ, ಜೂನ್ ತಿಂಗಳಿನಿಂದ ಶಾಲೆಗಳು ಆರಂಭವಾಗಿವೆ. ಇನ್ನು ಕೆಲವೇ ತಿಂಗಳಿನಲ್ಲಿ ಬೇಸಿಗೆ ರಜೆ ಕೂಡ ಆರಂಭವಾಗಲಿದೆ ಎಷ್ಟು ಕಡಿಮೆ ಸಮಯದಲ್ಲಿ 6-8ನೇ ತರಗತಿ ಮಕ್ಕಳಿಗೆ ಏನನ್ನು ಹೇಳಿಕೊಡಲು ಸಾಧ್ಯ? ಎಂದು ಪ್ರಶ್ನಿಸಿದ್ದಾರೆ. 

ಗಣೇಶ್ ಪೂಜಾರಿ ಎಂಬುವವರು ಮಾತನಾಡಿ, ನಮ್ಮ ಎರಡನೇ ತರಗತಿ ಓದುತ್ತಿದ್ದು, ಈ ವರ್ಷ ಶಾಲೆಗೆ ಹೋಗದೇ ಇದ್ದರೂ ನಮಗೆ ಯಾವುದೇ ಸಮಸ್ಯೆಯಿಲ್ಲ ಎಂದು ಹೇಳಿದ್ದಾರೆ. 

6-9 ತರಗತಿ ವಿದ್ಯಾರ್ಥಿಗಳ ಪೋಷಕರು ತಮ್ಮ ಮಕ್ಕಳಿಗೆ ಪ್ರಸಕ್ತ ಸಾಲಿನಲ್ಲಿ ತರಗತಿಗಳು ಆರಂಭವಾಗದೇ ಹೋದರೂ ಚಿಂತೆಯಿಲ್ಲ ಎಂಬಂತಿದ್ದರೆ 10-12ನೇ ತರಗತಿ ವಿದ್ಯಾರ್ಥಿಗಳ ಪೋಷಕರಿಗೆ ಆತಂಕ ಶುರುವಾಗಿದೆ. 

ಈ ನಡುವೆ ಹೇಳಿಕೆ ನೀಡಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು, ಶಿಕ್ಷಕರ ಅನುಕೂಲಕ್ಕೆ ತಕ್ಕಂತೆ ಆನ್‌ಲೈನ್ ತರಗತಿಗಳನ್ನು ನಡೆಸಲಾಗುತ್ತಿದೆ. ವಿದ್ಯಾರ್ಥಿಗಳು ಅನುಭವಿಸುತ್ತಿರು ಸಮಸ್ಯೆ ಕುರಿತು ಈಗಾಗಲೇ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ಪ್ರಸಕ್ತ ಸಾಲಿನಲ್ಲಿ ಶೈಕ್ಷಣಿಕ ವರ್ಷವನ್ನೇ ನಡೆಸದಂತೆ ಸಲಹೆ ನೀಡದ್ದೇನೆ. ಆದರೆ, ಸರ್ಕಾರ ಈ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಹೇಳಿದ್ದಾರೆ. 

SCROLL FOR NEXT