ರಾಜ್ಯ

ಫೆಬ್ರವರಿ 10ಕ್ಕೆ ನೂತನ ಸಚಿವರಿಗೆ ಖಾತೆ ಹಂಚಿಕೆ: ಸಿಎಂ ಯಡಿಯೂರಪ್ಪ

Raghavendra Adiga

ಬೆಂಗಳೂರು: ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಶಾಸಕರಿಗೆ ಖಾತೆ ಹಂಚಿಕೆ ನಡೆಸಬೇಕೆನ್ನುವ ಒತ್ತಡ ಹೆಚ್ಚುತ್ತಿರುವ ಬೆನ್ನಲ್ಲೇ ಫೆಬ್ರವರಿ 10 ರಂದು (ಸೋಮವಾರ) ಖಾತೆ ಹಂಚಿಕೆ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯುರಪ್ಪ ಶನಿವಾರ ಹೇಳಿದ್ದಾರೆ.

"ಎಲ್ಲವೂ ಸಿದ್ದವಿದೆ ಆದರೆ ಇಂದು ಎರಡನೇ ಶನಿವಾರದ ರಜೆ ಇರುವ ಕಾರಣ ಸೋಮವಾರ ಬೆಳಿಗ್ಗೆ ನಾವು ಖಾತೆಗಳನ್ನು ನೀಡುತ್ತೇವೆ" ಎಂದು ಯಡಿಯೂರಪ್ಪ ಹೇಳಿದರು.

ಕಾಂಗ್ರೆಸ್-ಜೆಡಿ (ಎಸ್) ಮೈತ್ರಿಕೂಟದ ಸರ್ಕಾರ ಉರುಳಿಸಲು ಬಿಜೆಪಿಯನ್ನು ಅಧಿಕಾರಕ್ಕೆ ತರಲು ಸಹಾಯ ಮಾಡಿದ 10 ಶಾಸಕರಿಗೆ ಯಡಿಯೂರಪ್ಪ ಸರ್ಕಾರದಲ್ಲಿ ಸಚಿವ ಸ್ಥಾನ ನೀಡಲಾಗಿದೆ.ಗುರುವಾರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಹತ್ತು ಮಂದಿಗೆ ಶನಿವಾರಕ್ಕೆ ಮುನ್ನ ಖಾತೆ ಹಂಚಿಕೆ ,ಮಾಡುವುದಾಗಿ ಯಡಿಯೂರಪ್ಪ ಈ ಮುನ್ನ ಮಾಹಿತಿ ನೀಡಿದ್ದರು. ಆದರೆ ಇದೀಗ ಶನಿವಾರ ರಜೆ ಇರುವ ಕಾರಣ ಖಾತೆ ಹಂಚಿಕೆ ಪ್ರಕ್ರಿಯೆ ಸೋಮವಾರಕ್ಕೆ ಮುಂದೂಡಲ್ಪಟ್ಟಿದೆ.

ಖಾಲಿ ಇರುವ ಉಳಿದ ಆರು ಸಚಿವ ಸ್ಥಾನಗಳಿಗೆ ಸಚಿವರನ್ನು ನೇಮಕ ಮಾಡಲು ತಾವು ದೆಹಲಿಗೆ ಹೋಗುವುದನ್ನು ಯಡಿಯೂರಪ್ಪ ತಳ್ಳಿ ಹಾಕಿದ್ದಾರೆ."ಪ್ರಸ್ತುತ ನಾನು ದೆಹಲಿಗೆ ತೆರಳುತ್ತಿಲ್ಲ. ಆದರೆ ಖಾತೆ ವಿತರಣೆ ಸೋಮವಾರ ನಡೆಯಲಿದೆ" ಎಂದು ಯಡಿಯುರಪ್ಪ ಸುದ್ದಿಗಾರರಿಗೆ ತಿಳಿಸಿದರು.

ಜಲಸಂಪನ್ಮೂಲ ಖಾತೆಗಾಗಿ ಒತ್ತಡ ಹೇರುತ್ತಿರುವ ಗೋಕಾಕ್ ಶಾಸಕ ರಮೇಶ್ ಜಾರಕಿಹೋಳಿಯವರ ಕಾರಣದಿಡ್ಮ ಮುಖ್ಯಮಂತ್ರಿಗಳು ಕಾತೆ ಹಂಚಿಕೆಯನ್ನು ಮುಂದಕ್ಕೆ ಹಾಕಿದ್ದಾರೆಂದು ಬಿಜೆಪಿಯ ಮೂಲಗಳು ಹೇಳಿವೆ. ಇನ್ನೊಂದೆಡೆ ಜಾರಕಿಹೋಳಿಯವರಿಗೆ ಲೋಕೋಪಯೋಗಿ ಖಾತೆ ನೀಡಲು ಬಿಜೆಪಿ ನಾಯಕತ್ವ ಬಯಸಿದೆ ಎನ್ನಲಾಗುತ್ತಿದೆ. ಶನಿವಾರ ಮುಂಜಾನೆಯವರೆಗೂ ಜಾರಕಿಹೋಳಿ ಯಡಿಯೂರಪ್ಪ ಮನೆಯಲ್ಲಿ ಅವರೊಡನೆ ವಿವರವಾಗಿ ಚರ್ಚಿಸಿದ್ದರು, ಆದರೆ ಅಂತಿಮವಾಗಿ ಅಸಮಾಧಾನದಿಂದ ಹೊರಬಂದಿದ್ದಾರೆ ಎಂದು ಹೇಳಲಾಗುತ್ತಿದೆ. 

ಗುರುವಾರ ನಡೆದ ಸಚಿವ ಸಂಪುಟ  ವಿಸ್ತರಣೆಯು "ಸ್ಥಳೀಯ" ಬಿಜೆಪಿ ನಾಯಕರಲ್ಲಿ ಅಸಮಾಧಾನಕ್ಕೆ ಕಾರಣವಾಯಿತು, ಅವರು ಹಲವಾರು ಮಂದಿ ತಮಗೆ ಮಹತ್ವದ ಸ್ಥಾನ ಕ;ಲ್ಪಿಸಿ ಎಂದು ಲಾಬಿ ಮಾಡುತ್ತಿದ್ದಾರೆ. ಆದರೆ  ಪಕ್ಷವು ಭಿನ್ನಾಭಿಪ್ರಾಯವನ್ನು ಶಮನ ಮಾಡಲು ಯತ್ನಿಸಿದೆ.

ಈ ಸಂಪುಟ ವಿಸ್ತರಣೆಯೊಡನೆ ಸರ್ಕಾರದಲ್ಲಿ ಒಟ್ಟು 28 ಸಚಿವರಿರಲಿದ್ದಾರೆ. ಇನ್ನು ಆರು ಸ್ಥಾನ ಮಾತ್ರವೇ ಖಾಲಿ ಉಳಿದಿದೆ.ಕಳೆದ ಆಗಸ್ಟ್ ನಲ್ಲಿ ನಡೆದಿದ್ದ ಮೊದಲ ಹಂತದ ವಿಸ್ತರಣೆ ವೇಳೆ 17 ಜನ ಮಂತ್ರಿಗಳಾಗಿ ಆಯ್ಕೆಯಾಗಿದ್ದರು.

SCROLL FOR NEXT