ರಾಜ್ಯ

'ಭಾರತ ವಿರುದ್ಧ ಮಾತನಾಡುವವರನ್ನು, ಪಾಕಿಸ್ತಾನ ಪರ ಘೋಷಣೆ ಕೂಗುವವರನ್ನು ಕಂಡಲ್ಲಿ ಗುಂಡಿಕ್ಕಬೇಕು': ಬಿ ಸಿ ಪಾಟೀಲ್ 

Sumana Upadhyaya

ಚಿತ್ರದುರ್ಗ: ಭಾರತದ ವಿರುದ್ಧ ಮಾತನಾಡುವವರನ್ನು, ಪಾಕಿಸ್ತಾನ ಪರ ಘೋಷಣೆ ಕೂಗುವವರನ್ನು ಕಂಡಲ್ಲಿ ಗುಂಡಿಕ್ಕುವ ಕಾನೂನನ್ನು ಜಾರಿಗೆ ತರಬೇಕು ಎಂದು ಕೃಷಿ ಸಚಿವ ಬಿ ಸಿ ಪಾಟೀಲ್ ಹೇಳಿದ್ದಾರೆ.

ಇದಕ್ಕೆ ಚೀನಾ ದೇಶದ ಉದಾಹರಣೆ ನೀಡಿದ ಅವರು, ದೇಶದ್ರೋಹಿಗಳನ್ನು ಶಿಕ್ಷಿಸುವ ಕಠಿಣ ಕಾನೂನನ್ನು ಪ್ರಧಾನಿ ನರೇಂದ್ರ ಮೋದಿಯವರು ತರಬೇಕು ಎಂದು ಮನವಿ ಮಾಡಿಕೊಂಡರು.

ಚಿತ್ರದುರ್ಗದಲ್ಲಿ ಎಎನ್ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, ದೇಶದ ವಿರುದ್ಧ ಮಾತನಾಡುವವರನ್ನು ಮತ್ತು ಪಾಕಿಸ್ತಾನ ಪರ ಘೋಷಣೆ ಕೂಗುವವರನ್ನು ಕಂಡಲ್ಲಿ ಗುಂಡಿಕ್ಕುವ ಕಾನೂನನ್ನು ಭಾರತದಲ್ಲಿ ಕೂಡ ಜಾರಿಗೆ ತರಬೇಕೆಂಬುದು ನನ್ನ ಅಭಿಪ್ರಾಯ. ಅಂತಹ ಕಾನೂನಿನ ಅಗತ್ಯ ಖಂಡಿತಾ ನಮ್ಮ ದೇಶಕ್ಕಿದೆ ಎಂದರು.

ಈ ದೇಶದಲ್ಲಿದ್ದುಕೊಂಡು ಇಲ್ಲಿನ ನೆಲ, ಜಲ, ಗಾಳಿ, ಆಹಾರವನ್ನು ಸೇವಿಸುತ್ತಾರೆ. ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗುವುದಾದರೆ ಅವರು ಇಲ್ಲೇಕೆ ಇರಬೇಕು, ಚೀನಾದಲ್ಲಿ, ತಮ್ಮ ದೇಶದ ವಿರುದ್ಧ ಮಾತನಾಡಲು ಅಲ್ಲಿನ ಜನರು ಭಯಪಡುತ್ತಾರೆ. ಇಂತಹ ದೇಶದ್ರೋಹಿಗಳ ವಿರುದ್ಧ ಕಠಿಣ ಕಾನೂನು ಜಾರಿಗೆ ತರಲು ಪ್ರಧಾನಿ ಮೋದಿಯವರನ್ನು ಮನವಿ ಮಾಡಿಕೊಳ್ಳುತ್ತೇನೆ ಎಂದರು.

ಈ ಮಧ್ಯೆ, ಕಲಬುರಗಿಯಲ್ಲಿ ಇತ್ತೀಚೆಗೆ ಸಿಎಎ ವಿರುದ್ಧ ನಡೆದ ರ್ಯಾಲಿಯಲ್ಲಿ ದ್ವೇಷದ ಭಾಷಣ ಮಾಡಿದ್ದ ಆರೋಪದ ಮೇಲೆ ಆಲ್ ಇಂಡಿಯಾ ಮಜ್ಲಿಸ್-ಇ-ಇಟ್ಟೆಹದ್-ಉಲ್-ಮುಸ್ಲಿಮೀನ್ (ಎಐಎಂಐಎಂ) ನಾಯಕ ವಾರಿಸ್ ಪಠಾಣ್ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ. 

ಫೆಬ್ರವರಿ 29ಕ್ಕೆ ತನಿಖೆಗೆ ಪೊಲೀಸರ ಮುಂದೆ ಹಾಜರಾಗುವಂತೆ ಸಮನ್ಸ್ ಹೊರಡಿಸಲಾಗಿದೆ ಎಂದು ಕಲಬುರಗಿ ಪೊಲೀಸ್ ಆಯುಕ್ತ ಎಂ ಎನ್ ನಾಗರಾಜ್ ತಿಳಿಸಿದ್ದಾರೆ.

ಪೊಲೀಸ್ ಸಮನ್ಸ್ ಬಗ್ಗೆ ಮುಂಬೈಯಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಪಠಾಣ್, ತಮಗೆ ಯಾರನ್ನೂ ನೋವು ಮಾಡುವ ಉದ್ದೇಶ ಇರಲಿಲ್ಲ. ಮಾಧ್ಯಮದವರು ತಮ್ಮ ಭಾಷಣವನ್ನು ತಿರುಚಿದ್ದಾರೆ ಎಂದು ಆರೋಪಿಸಿದರು. 

SCROLL FOR NEXT