ರಾಜ್ಯ

ಮಕರ ಸಂಕ್ರಮಣದ ಅಂಗವಾಗಿ ಮೊದಲ ಬಾರಿಗೆ ಮಹಿಳಾ ಪಥಸಂಚಲನ

Srinivasamurthy VN

ಬಾಗಲಕೋಟೆ: ಇದುವರೆಗೂ ಬಲಾಢ್ಯ ಕೇಸರಿ ಕೋಟೆ ಬಾಗಲಕೋಟೆಯಲ್ಲಿ ಸಂಘ ಪರಿವಾರದವರಿಂದ ಪ್ರತಿವರ್ಷ ರಾಜ್ಯವೇ ತಿರುಗಿ ನೋಡುವಂತಹ ಆಕರ್ಷಕ ಪಥ ಸಂಚಲನ ನಡೆಯುತ್ತದೆ ಎನ್ನುವುದರ ಮಧ್ಯೆ ಇದೇ ಮೊದಲ ಬಾರಿಗೆ ಮಕರ ಸಂಕ್ರಮಣದ ಅಂಗವಾಗಿ ಭಾನುವಾರ ಸಂಜೆ ರಾಷ್ಟ್ರೀಯ ಸ್ವಯಂ ಸೇವಿಕಾ ಸಮಿತಿ ಆಶ್ರಯದಲ್ಲಿ ಶ್ವೇತ ವರ್ಣದ ಬಟ್ಟೆಗಳನ್ನುಟ್ಟ ಮಹಿಳೆಯರಿಂದ ಆಕರ್ಷಕ ಪಥ ಸಂಚಲ ನಡೆಯಿತು.

ಸಂಘ ಪರಿವಾರದ ಕಾರ್ಯಕರ್ತರಿಂದ ಆಕರ್ಷಕ ಪಥ ಸಂಚಲನದ ಜತೆಗೆ ಇತ್ತೀಚಿನ ವರ್ಷಗಳಲ್ಲಿ ಸಂಘ ಪರಿವಾರದ ಬಾಲ ಸದಸ್ಯರಿಂದ ಪಥ ಸಂಚಲನ ಪದ್ಧತಿ ಆರಂಭಗೊಂಡಿದೆ. ಇದೀಗ ಮಹಿಳೆಯರಿಂದಲೂ ಆಕರ್ಷಕ ಪಥ ಸಂಚಲನ ಆರಂಭಗೊಂಡಿರುವುದು ಮಹಿಳೆಯರಲ್ಲೂ ಹೊಸ ಹುಮ್ಮಸ್ಸಿಗೆ ಕಾರಣವಾಗಿದೆ.

ರಾಷ್ಟ್ರೀಯ ಸೇವಿಕ ಸಮಿತಿ ಆಶ್ರಯದಲ್ಲಿ ಭಾನುವಾರ ಸಂಜೆ ನಗರದ ಚರಂತಿಮಠದಿಂದ ಘೋಷ್ ಸಹಿತ ಆರಂಭಗೊಂಡ ಪಥ ಸಂಚಲನ ಪ್ರಮುಖ ಬೀದಿಗಳ ಮೂಲಕ ವಾಪಸ್ಸು ಚರಂತಿಮಠ ತಲುಪಿತು. ಪಥಸಂಚಲನದ ಮಾರ್ಗದುದ್ದಕ್ಕೂ ಅದ್ದೂರಿ ಸ್ವಾಗತ ಕೋರಿದ ಜನತೆ ಅಲ್ಲಲ್ಲಿ ಪುಷ್ಪಮಳೆಗರೆದರು. ಇನ್ನೂ ಕೆಲ ಕಡೆಗಳಲ್ಲಿ ಮಾರ್ಗದಲ್ಲಿ ಚಿತ್ತ ಚಿತ್ತಾರದ ರಂಗೋಲಿ ಹೊಯ್ದು ಪಥಸಂಚಲನ ಬರಮಾಡಿಕೊಂಡರು. ಏತನ್ಮಧ್ಯೆ ಅಲ್ಲಲ್ಲಿ ಮಕ್ಕಳು ರಾಷ್ಟ್ರ ಪುರುಷರ ವೇಷದಲ್ಲಿ ಕಾಣಿಸಿಕೊಂಡು ಗಮನ ಸೆಳೆದರು.

ಪಥಸಂಚಲನದಲ್ಲಿ ಭಾಗವಹಿಸಿದ್ದವರು. ಪಥಸಂಚಲನಕ್ಕೆ ಸ್ವಾಗತ ಕೋರಲು ಮಾರ್ಗದ ಇಕ್ಕೆಲಗಳಲ್ಲಿ ನಿಂತವರು ಛತ್ರಪತಿ ಶಿವಾಜಿ, ಭವಾನಿ, ಭಾರತ ಮಾತೆಯನ್ನು ಸ್ಮರಿಸುವ ಮೂಲಕ ರೋಮಾಂಚನ ವಾತಾವರಣ ಸೃಷ್ಟಿಸಿದ್ದರು. ಪಥ ಸಂಚಲನದಲ್ಲಿ ಬಾಗಲಕೋಟೆ ನಗರದ ಮಹಿಳೆಯರು ಸೇರಿದಂತೆ ಜಿಲ್ಲೆ ಮುಧೋಳ, ಜಮಖಂಡಿ, ಇಳಕಲ್, ಬೀಳಗಿ ಸೇರಿದಂತೆ ನಾನಾ ಭಾಗಗಳಿಂದ ಆಗಮಿಸಿದ್ದ ಮಹಿಳೆಯರು ಭಾವಹಿಸಿದ್ದರು. ಮಹಿಳಾ ಮುಖಂಡರಾದ ಜ್ಯೋತಿರಾವ್, ಜ್ಯೋತಿ ಭಜಂತ್ರಿ, ಶಶಿಕಲಾ ಮಜ್ಜಗಿ, ಸವಿತಾ ಲೆಂಕಣ್ಣವರ, ಶಿವಲೀಲಾ ಪಟ್ಟಣಶೆಟ್ಟಿ, ಜ್ಯೋತಿ ಕದಾಂಪುರ, ಸುಧಾ ದೇಸಾಯಿ, ಶೈಲಜಾ ಅಂಕಲಗಿ ಇತರರು ಇದ್ದರು.

-ವಿಠಲ ಬಲಕುಂದಿ

SCROLL FOR NEXT