ರಾಜ್ಯ

ಬಂಟ್ವಾಳ: ಮೆಹಂದಿ ಕಾರ್ಯಕ್ರಮದಲ್ಲಿ ಡಿಜೆ ಡ್ಯಾನ್ಸ್; ವರ, ಕುಟುಂಬದ ವಿರುದ್ಧ ಪ್ರಕರಣ ದಾಖಲು

Raghavendra Adiga

ಬಂಟ್ವಾಳ: ಮದುವೆ ಕಾರ್ಯಕ್ರಮದಲ್ಲಿ ಮೈಕ್ ಹಾಗೂ ಡಿಜೆ ಬಳಸಿದ ಪ್ರಕರಣಕ್ಕೆ ಸಂಬಂಧಿಸಿ ವರ, ಆತನ ತಂದೆ ಹಾಗೂ ಇತರರ ವಿರುದ್ಧ ಬಂಟ್ವಾಳ ಗ್ರಾಮಾಂತರ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿವಾಹದ ಸಂಬಂಧ ಮೆಹಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಜನರು ಮೈಕ್ ಸಹಾಯದಿಂದ ನುಡಿಸುವ ಅಬ್ಬರದ ಸಂಗೀತಕ್ಕೆ ನೃತ್ಯ ಮಾಡಿದ್ದಾರೆ ಎಂದು ಆರೋಪಿಸಿದ್ದು ಬಂಟ್ವಾಳದ ಅಮ್ಮುಂಜೆಯಲ್ಲಿರಿವ ಮನೆಯಲ್ಲಿ ಈ ಕಾರ್ಯಕ್ರಮ ನಡೆದಿದೆ. ಗ್ರಾಮದ ಶಿವಪ್ಪ ಪೂಜಾರಿ, ಅವರ ಮಗ ತಿಲಕ್ ರಾಜ್ ಮತ್ತು ಇತರರನ್ನು ಆರೋಪಿಗಳೆಂದು ಗುರುತಿಸಲಾಗಿದೆ. ಕರ್ನಾಟಕ ಸಾಂಕ್ರಾಮಿಕ ರೋಗ ಸುಗ್ರೀವಾಜ್ಞೆ 2020 ರ ಭಾರತೀಯ ದಂಡ ಸಂಹಿತೆ ಸೆಕ್ಷನ್  5 (1) ರ ಸೆಕ್ಷನ್ 269 ಮತ್ತು 270 ರ ಅಡಿಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.

ಮೆಹಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕೆಲವರು ಡಿಜೆ ಸಂಗೀತವನ್ನು ಗಟ್ಟಿಯಾಗಿ ನುಡಿಸುತ್ತಿದ್ದಂತೆ ನೃತ್ಯ ಮಾಡಿದ್ದರು. ಕಾರ್ಯಕ್ರಮದಲ್ಲಿ 200 ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು ಮತ್ತು ಕಾರ್ಯಕ್ರಮಕ್ಕೆ ಹಾಜರಾದವರು ಫೇಸ್ ಮಾಸ್ಕ್ ಧರಿಸಿರಲಿಲ್ಲ ಎಂದು ಹೇಳಲಾಗಿದೆ. ಸಮಾರಂಭದಲ್ಲಿ ಯುವಕರು ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ ಇಚ್ಚೆಬಂದಂತೆ ನೃತ್ಯ ಮಾಡಿದರು. ಅಲ್ಲಿ ನೆರೆದಿದ್ದ ಯುವಜನರು ಜೋರಾಗಿ ಸಂಗೀತ ಕೇಳುತ್ತಿದ್ದಂತೆ ಹುಚ್ಚುಚ್ಚಾಗಿ ನೃತ್ಯ ಮಾಡುವ ವಿಡಿಯೋ ವೈರಲ್ ಆಗಿದೆ.

ಮದುವೆ ಸಮಾರಂಭಗಳಲ್ಲಿ 50 ಕ್ಕೂ ಹೆಚ್ಚು ಜನರು ಹಾಜರಾಗಲು ರಾಜ್ಯ ಸರ್ಕಾರ ನಿರ್ಬಂಧಿಸಿದೆ. ಸಂಬಂಧಪಟ್ಟ ಕುಟುಂಬವು ಹಲವಾರು ವಿಧಗಳಲ್ಲಿ ನಿಯಮಗಳನ್ನು ಉಲ್ಲಂಘಿಸಿದೆ ಎಂಬ ಮಾಹಿತಿ ಇದ್ದು ಇದನ್ನು ಗಮನಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಲ್ಲಿನ ಗ್ರಾಮೀಣ ಪೊಲೀಸರಿಗೆ ತನಿಖೆ ನಡೆಸುವಂತೆ ಸೂಚನೆ ನೀಡಿದ್ದರು. ತನಿಖೆಯ ಸಮಯದಲ್ಲಿ, ಈ ಸಮಾರಂಭದಲ್ಲಿ ಲಾಕ್ ಡೌನ್ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಪೊಲೀಸರು ಕಂಡುಕೊಂಡರು. ಶಿವಪ್ಪನ ಮಗ ತಿಲಕ್ ರಾಜ್ ಅವರ ವಿವಾಹಕ್ಕೆ ಸಂಬಂಧಿಸಿದಂತೆ ಜುಲೈ 1 ರಂದು ಅಮ್ಮುಂಜೆಯ ಶಿವಪ್ಪ ಪೂಜಾರಿ ಅವರ ನಿವಾಸದಲ್ಲಿ ಈ ಸಮಾರಂಭವನ್ನು ಆಯೋಜಿಸಲಾಗಿತ್ತು.

ಜುಲೈ 5 ರ ಭಾನುವಾರದಂದು ಬಂಟ್ವಾಳ ಗ್ರಾಮೀಣ ಪೊಲೀಸರು ಶಿವಪ್ಪ ಪೂಜಾರಿ, ತಿಲಕ್ ರಾಜ್ ಮತ್ತು ಇತರರ ವಿರುದ್ಧ ಈ ಪ್ರಕರಣವನ್ನು ದಾಖಲಿಸಿದ್ದಾರೆ.

SCROLL FOR NEXT