ಸಿಲಿಕಾನ್ ಸಿಟಿಯಲ್ಲಿ ಹೆಚ್ಚುತ್ತಿರುವ ಕೊರೋನಾ: ಸೋಂಕು ನಿಯಂತ್ರಣಕ್ಕೆ ಸರ್ಕಾರದಿಂದ 60 ಅಧಿಕಾರಿಗಳ ನಿಯೋಜನೆ
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಹಾಮಾರಿ ಕೊರೋನಾ ಆರ್ಭಟ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, ಸೋಂಕು ನಿಯಂತ್ರಿಸಲು ಸರ್ಕಾರ ಇದೀಗ 60 ಐಎಎಸ್, ಐಪಿಎಸ್ ಹಾಗೂ ಐಎಫ್ಎಸ್ ಅಧಿಕಾರಿಗಳನ್ನು ನಿಯೋಜಿಸಿದೆ.
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಹಾಮಾರಿ ಕೊರೋನಾ ಆರ್ಭಟ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, ಸೋಂಕು ನಿಯಂತ್ರಿಸಲು ಸರ್ಕಾರ ಇದೀಗ 60 ಐಎಎಸ್, ಐಪಿಎಸ್ ಹಾಗೂ ಐಎಫ್ಎಸ್ ಅಧಿಕಾರಿಗಳನ್ನು ನಿಯೋಜಿಸಿದೆ.
ನಗರದಲ್ಲಿ ಕೊರೋನಾ ನಿಗ್ರಹಿಸಲು ಈ 60 ಅಧಿಕಾರಿಗಳಿಗೂ ಸರ್ಕಾರ ಪ್ರತ್ಯೇಕ ಕಾರ್ಯಗಳನ್ನು ನೀಡಿದ್ದು, ಈಗಾಗಲೇ ಅಧಿಕಾರಿಗಳು ಕಾರ್ಯನಿರ್ವಹಿಸಲು ಆರಂಭಿಸಿದ್ದಾರೆಂದು ತಿಳಿದುಬಂದಿದೆ.
ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯ್ ಭಾಸ್ಕರ್ ಅವರು ಭಾನುವಾರ 14 ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳ ಜೊತೆಗೆ ಇನ್ನೂ ಏಳು ತಂಡಗಳನ್ನು ರಚಿಸಿದ್ದು, ಈ ತಂಡವು ಬೆಂಗಳೂರಿನ ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಮೀಸಲಾತಿ ಕುರಿತು ಪರಿಶೀಲನೆ ನಡೆಸಲಿದ್ದಾರೆಂದು ತಿಳಿದುಬಂದಿದೆ.
ಶನಿವಾರವಷ್ಟೇ ರಾಜ್ಯ ಸರ್ಕಾರ ಬಿ ಹೆಚ್ ಅನಿಲ್ ಕುಮಾರ್ ಅವರನ್ನು ವರ್ಗಾವಣೆ ಮಾಡಿ ಎನ್ ಮಂಜುನಾಥ ಪ್ರಸಾದ್ ಅವರನ್ನು ಬ್ರೂಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆಯುಕ್ತರನ್ನಾಗಿ ನೇಮಕ ಮಾಡಿತ್ತು. ಕೇವಲ ಆಯುಕ್ತರಷ್ಟೇ ಅಲ್ಲದೆ, ಆರೋಗ್ಯ, ಕಂದಾಯ, ಆಡಳಿತ, ಹಣಕಾಸು ಇತ್ಯಾದಿ ವಿಶೇಷ ಆಯುಕ್ತರೂ ಸೇರಿದಂತೆ ಏಳು ಮಂದಿ ಐಎಎಸ್ ಅಧಿಕಾರಿಗಳನ್ನೂ ನೇಮಕ ಮಾಡಿಕೊಂಡಿತ್ತು. ಈ ಅಧಿಕಾರಿಗಳನ್ನು ಕೋವಿಡ್ ಟಾಸ್ಕ್ ಫೋರ್ಸ್ ತಂಡಕ್ಕೆ ಸೇರ್ಪಡೆಗೊಳಿಸಲಾಗಿದೆ.
ಈ ಹಿಂದೆ ಮುಖ್ಯಮಂತ್ರಿ ಬಿ ಎಸ್ ಯಡಿಯುರಪ್ಪ ಅವರು ಬಿಬಿಎಂಪಿಯ ಎಂಟು ವಲಯಗಳ ಮೇಲ್ವಿಚಾರಣೆಗಾಗಿ ಹೆಚ್ಚುವರಿಯಾಗಿ ಎಂಟು ಮಂದಿ ಹಿರಿಯ ಐಎಎಸ್ ಅಧಿಕಾರಿಗಳನ್ನು ನೇಮಿಸಿದ್ದರು. ಬೆಂಗಳೂರು ನಗರ ಪೊಲೀಸ್ ಆಯುಕ್ತರಲ್ಲದೆ, ಡಿಸಿಪಿಗಳಾಗಿ ಕಾರ್ಯನಿರ್ವಹಿಸುತ್ತಿರುವ ಅನೇಕ ಐಪಿಎಸ್ ಅಧಿಕಾರಿಗಳು ಈ ತಂಡದಲ್ಲಿದ್ದಾರೆ.
ಉತ್ತಮ ಕಾರ್ಯನಿರ್ವಹಣೆಗೆ ಮತ್ತಷ್ಟು ಹಿರಿಯ ಅಧಿಕಾರಿಗಳ ಅಗತ್ಯವಿದೆ:
ಜುಲೈ ಮೊದಲ ವಾರದವರೆಗೂ ಐಎಎಸ್, ಐಪಿಎಸ್ ಹಾಗೂ ಐಎಫ್ಎಸ್ ಹಾಗೂ ಕೆಎಎಸ್ ಅಧಿಕಾರಿಗಳು, ಇನ್ನಿತರೆ ಹಿರಿಯ ಅಧಿಕಾರಿಗಳನ್ನೊಳಗೊಂಡ 22 ತಂಡಗಳನ್ನು ರಚನೆ ಮಾಡಲಾಗಿತ್ತು. ಇದರಲ್ಲಿರುವ ಒಂದೊಂದು ತಂಡಕ್ಕೂ ಆಸ್ಪತ್ರೆಯ ಮೂಲಕ ಸೌಕರ್ಯ, ಹಾಸಿಗೆಗಳು, ಆ್ಯಂಬುಲೆನ್ಸ್ ಪರಿಶೀಲನೆ ಸೇರಿದಂತೆ ಅನೇಕ ಕಾರ್ಯಗಳ ಜವಾಬ್ದಾರಿಯನ್ನು ವಹಿಸಲಾಗಿದೆ. ಇದರ ಜೊತೆಗೆ ಇದೀಗ ಮತ್ತಷ್ಟು ತಂಡವನ್ನು ರಚನೆ ಮಾಡಲಾಗಿದ್ದು, ಈ ತಂಡವು ಮುಂಜಾಗ್ರತಾ ಕ್ರಮಗಳ ಕುರಿತಂತೆ ಗಮನ ಹರಿಸುತ್ತದೆ ಎನ್ನಲಾಗುತ್ತಿದೆ.
ಕೊರೋನಾ ಸೋಂಕು ಹರಡುತ್ತಿರುವ ವೇಗವನ್ನು ನೋಡಿದರೆ ಕಾರ್ಯನಿರ್ವಹಣೆಗೆ ಮತ್ತಷ್ಟು ಹಿರಿಯ ಅಧಿಕಾರಿಗಳ ಅಗತ್ಯವಿದೆ ಎನಿಸುತ್ತದೆ. ಯಾವುದೇ ನಿರ್ಧಾರ ಕೈಗೊಳ್ಳುವ ಸ್ಥಿತಿಯಲ್ಲಿ ನಾವಿಲ್ಲ. ಯಾವುದೇ ನಿರ್ಧಾರ ತೆಗೆದುಕೊಂಡರೂ ಅದನ್ನು ಚಾಲ್ತಿಗೆ ತರಲು ಹಿರಿಯ ಅಧಿಕಾರಿಗಳ ಅಗತ್ಯವಿದೆ. ಕಿರಿಯ ಅಧಿಕಾರಿಗಳಿಗೆ ಕಾರ್ಯ ನೀಡಿದರೆ, ಹಿರಿಯ ಅನುಮತಿ ಇಲ್ಲದೆಯೇ ಅವರು ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಈಗಾಗಲೇ ರಾಜ್ಯದಲ್ಲಿ ಐಎಎಸ್ ಅಧಿಕಾರಿಗಳ ಕೊರತೆ ಹೆಚ್ಚಾಗಿದೆ. ರಾಜ್ಯದಲ್ಲಿ ಮುಖ್ಯ ಕಾರ್ಯದರ್ಶಿಗಳೂ ಸೇರಿದಂತೆ 250 ಮಂದಿ ಐಎಎಸ್ ಅಧಿಕಾರಿಗಳಿದ್ದಾರೆ. ಇದರಲ್ಲಿ ಈಗಾಗಲೇ ಸಾಕಷ್ಟು ಅಧಿಕಾರಿಗಳು 2-3 ಹುದ್ದೆಗಳನ್ನು ನಿರ್ವಹಿಸುತ್ತಿದ್ದಾರೆಂದು ತಿಳಿದುಬಂದಿದೆ.
ರಾಜ್ಯ ಸರ್ಕಾರ ಹಿರಿಯ ಅಧಿಕಾರಿಗಳು ಹಾಗೂ ಕಾರ್ಯನಿರ್ವಹಿಸುವ ಸಾಮರ್ಥ್ಯವುಳ್ಳ ಅಧಿಕಾರಿಗಳನ್ನು ನೇಮಿಸಿದ್ದೇ ಆದರೆ, ಪರಿಸ್ಥಿತಿ ಬದಲಾಗುವ ಸಾಧ್ಯತೆಗಳಿವೆ. ಆದರೆ, ಎಲ್ಲದಕ್ಕೂ ಸಹಕಾರದ ಅಗತ್ಯವಿದೆ ಎಂದು ಕೆಪಿಸಿಸಿ ಕಾರ್ಯಕಾರಿ ಅಧ್ಯಕ್ಷ ಈಶ್ವರ್ ಖಂಡ್ರೆಯವರು ಹೇಳಿದ್ದಾರೆ.