ರಾಜ್ಯ

ಶೀಘ್ರವೇ ಉತ್ತರ ಕನ್ನಡದ ಪ್ರವಾಸಿ ತಾಣಗಳಿಗೆ ವಿಮಾನದಲ್ಲಿ ತೆರಳಬಹುದು, ಏಕೆಂದರೆ ಕಾರವಾರಕ್ಕೆ ಸಿಗಲಿದೆ ವಿಮಾನ ನಿಲ್ದಾಣ! 

Srinivas Rao BV

ಬೆಂಗಳೂರು: ಆಕರ್ಷಣೀಯ ಪ್ರವಾಸಿ ತಾಣಗಳನ್ನು ಹೊಂದಿರುವ ಉತ್ತರ ಕನ್ನಡ ಜಿಲ್ಲೆ ಇನ್ನು ಮುಂದಿನ ದಿನಗಳಲ್ಲಿ ಹಿಂದೆಂದೂ ಕಾಣದ ಉದ್ಯಮ ಹಾಗೂ ಪ್ರವಾಸೋದ್ಯಮ ಉತ್ತೇಜನ ಕಾಣಲಿದೆ. ಏಕೆಂದರೆ ಕಾರವಾರದಲ್ಲಿ ನಾಗರಿಕ ವಿಮಾನಗಳ ಕಾರ್ಯನಿರ್ವಹಣೆಯ ನಿಲ್ದಾಣ ನಿರ್ಮಾಣವಾಗಲಿದೆ. 

ರಾಜ್ಯ ಸಚಿವ ಸಂಪುಟದಲ್ಲಿ ಈ ಬಗ್ಗೆ ಮಹತ್ವದ ನಿರ್ಧಾರ ಘೋಷಿಸಲಾಗಿದ್ದು, ಕಾರವಾರಕ್ಕೆ ವಿಮಾನ ನಿಲ್ದಾಣ ಯೋಜನೆಯನ್ನು ಕೈಗೆತ್ತಿಕೊಳ್ಳಲು ತೀರ್ಮಾನಿಸಿದೆ.

ಇದಕ್ಕೂ ಮುನ್ನ ಕಾರವಾರದಲ್ಲಿ ನೌಕಾಪಡೆ ತನ್ನ ಸರಕುಗಳ ಸಾಗಾಣಿಕೆಗೆ ಸಹಕಾರಿಯಾಗಬಲ್ಲ ಸರಕು ಸಾಗಾಣಿಕೆ ವಿಮಾನಗಳ ನಿಲ್ದಾಣದ ಯೋಜನೆಯನ್ನು ಹೊಂದಿತ್ತು. ಆದರೆ ಈಗ ಅದನ್ನು ಪ್ರಯಾಣಿಕ ವಿಮಾನ ನಿಲ್ದಾಣಕ್ಕೆ ವಿಸ್ತರಣೆ ಮಾಡಲಾಗಿದೆ. ಇದರಿಂದಾಗಿ ಪ್ರಯಾಣಿಕ ವಿಮಾನಗಳೂ ಶೀಘ್ರವೇ ಕಾರವಾರದಿಂದ ದೇಶದ ವಿವಿಧ ಭಾಗಗಳಿಗೆ ಸಂಚರಿಸುವಂತಾಗಲಿದೆ.  ಅಂಕೋಲಾ ತಾಲೂಕಿನ ಅಲಗೇರಿ, ಭಾವಿಕರ್ ಗ್ರಾಮಗಳ ನಡುವೆ 97.1 ಎಕರೆಗಳಷ್ಟು ಪ್ರದೇಶದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗಲಿವೆ.

70 ಸೀಟರ್ ಗಳ ಎಟಾರ್-72  ವಿಮಾನಗಳು ಮಾತ್ರ ಕಾರ್ಯನಿರ್ವಹಣೆ ಮಾಡಬಲ್ಲ ವಿಮಾನ ನಿಲ್ದಾಣ ಅಭಿವೃದ್ಧಿಗೆ ನೌಕಾಪಡೆ ಒಪ್ಪಿಗೆ ಸೂಚಿಸಿದೆ. ಭವಿಷ್ಯದಲ್ಲಿ ಇದನ್ನು ದೊಡ್ಡ ವಿಮಾನಗಳಾದ B737, A320 ಸಂಚರಿಸುವಂತೆ 3,000 ಮೀಟರ್ ಗಳಿಗೆ ವಿಸ್ತರಣೆ ಮಾಡಲಾಗುತ್ತದೆ ಎಂದು ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕಪಿಲ್ ಮೋಹನ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ. 

ರಾಷ್ಟ್ರೀಯ ಹೆದ್ದಾರಿ-66 ಹಾಗೂ ಕೊಂಕಣ್ ರೈಲ್ವೆ ಲೈನ್ ನ ಪಕ್ಕದಲ್ಲಿ ಈ ವಿಮಾನ ನಿಲ್ದಾಣ ನಿರ್ಮಾಣವಾಗಲಿದ್ದು, ಉತ್ತರ ಕನ್ನಡ ಸಾಗಾಣಿಕೆ ಹಾಗೂ ಮೂಲಸೌಕರ್ಯದ ಹಬ್ ಆಗುವುದಕ್ಕೆ ಸಹಕಾರಿಯಾಗಲಿದೆ ಎಂದು ಕಪಿಲ್ ಮೋಹನ್ ತಿಳಿಸಿದ್ದಾರೆ. 
ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಈ ಬಗ್ಗೆ ಮಾತನಾಡಿದ್ದು, ಈ ವಿಮಾನ ನಿಲ್ದಾಣ ಭವಿಷ್ಯದಲ್ಲಿ ಉತ್ತರ ಕನ್ನಡದ ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗಲಿದೆ, ಉದ್ಯೋಗಾವಕಾಶ, ಉದ್ಯಮ ಹೆಚ್ಚುವುದಕ್ಕೆ ಸಾಧ್ಯವಾಗಲಿದೆ. ಜೊತೆಗೆ ದಾಂಡೇಲಿ, ಅಟ್ಟಿವೆರಿ ಪಕ್ಷಿಧಾಮ, ಗೋಕರ್ಣ, ಮುರುಡೇಶ್ವರ, ಓಂ ಬೀಚ್, ಯಾಣ, ಕುಡ್ಲೆ ಬೀಚ್ ಗಳಿಗೆ ಪ್ರವಾಸಿಗಳು ಸುಲಭವಾಗಿ ಭೇಟಿ ನೀಡುವುದಕ್ಕೂ ಕಾರವಾರ ವಿಮಾನ ನಿಲ್ದಾಣ ಉಪಯುಕ್ತವಾಗಲಿದೆ.

SCROLL FOR NEXT