ರಾಜ್ಯ

ಮಳೆಗೆ ಹಂಪಿಯ ಶಿವ-ದುರ್ಗಾದೇವಿ ದೇಗುಲದ ಗೋಡೆಗಳು ಕುಸಿತ

Manjula VN

ಬಳ್ಳಾರಿ: ಕಳೆದ 4-5 ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ವಿಶ್ವಪರಂಪರೆ ಹೊಂದಿರುವ ಹಂಪಿಯ ಲೋಕಪಾವನಿ ಬಳಿಯ ಶಿವ-ದುರ್ಗಾದೇವಿ ದೇವಸ್ಥಾನದ ಗೋಡೆಗಳು ಕುಸಿದುಬಿದ್ದವೆ ಎಂದು ತಿಳಿದುಬಂದಿದೆ. 

ಈ ಹಿಂದೆಯೇ ದೇವಸ್ಥಾನ ಶಿಥಿಲಗೊಂಡಿದ್ದು, ಎರಡು ವರ್ಷಗಳ ಹಿಂದೆ ಇದೇ ದೇವಸ್ಥಾನದ ಎಡಭಾಗದ ಗೋಡೆ ಕುಸಿದಿತ್ತು. ಈಗ ಮತ್ತೆ ದೇವಸ್ಥಾನದ ಮುಂದಿನ ಗೋಡೆಯು ಕುಸಿದು ದೇವಸ್ಥಾನದ ನಾಲ್ಕು ಕಲ್ಲು ಕಂಬಗಳು ಸಹ ಉರುಳಿವೆ. ಇದರಲ್ಲಿ ಒಂದು ಕಂಬವು ಮುರಿದಿದೆ. ಸತತ ಮಳೆಯಿಂದಾಗಿ ದೇವಸ್ಥಾನ ಸುತ್ತಮುತ್ತ ನೀರು ತುಂಬಿಕೊಂಡಿದ್ದರಿಂದ ಭಾನುವಾರ ಬೆಳಿಗ್ಗೆ ದೇಗುಲದ ಕಲ್ಲು ಕಂಬಗಳು ನೆಲಕ್ಕುರುಳಿವೆ. ಇದರಿಂದ ದೇಗುಲ ಬಲಕ್ಕೆ ಬಾಗಿದೆ.

ವಿರೂಪಾಕ್ಷೇಶ್ವರ ಸ್ವಾಮಿ ದೇವಸ್ಥಾನ ಹಿಂಭಾಗದಲ್ಲಿ ಬರುವ ಲೋಕಪಾವನಿಯ ಬಳಿಯ ಶಿವ-ದುರ್ಗಾದೇವಿ ದೇವಸ್ಥಾನದಲ್ಲಿ ಪ್ರವಾಸಿಗರು ಭೇಟಿ ನೀಡುವುದು ಕಡಿಮೆ. ನಿತ್ಯ ಇಲ್ಲಿ ಪೂಜೆ ನಡೆಯುತ್ತಿರಲಿಲ್ಲ. ಧಾರ್ಮಿಕ ಕಾರ್ಯಕ್ರಮಗಳಿಗೆ ಕೆಲವರು ಆಗಾಗ್ಗೆ ಭೇಟಿ ನೀಡುತ್ತಿದ್ದುದ್ದು ಬಿಟ್ಟರೆ ಭಕ್ತರ ಭೇಟಿ ಇರಲಿಲ್ಲ. ಲೋಕಪಾವನ ತೀರ್ಥ ಆವರಣದಲ್ಲಿ ಅನೇಕ ಚಿಕ್ಕಚಿಕ್ಕ ದೇವರ ಮೂರ್ತಿಗಳ ವಿಗ್ರಹಗಳು ಸಾಕಷ್ಟು ಇವೆ. ಇವುಗಳಲ್ಲಿ ಹಳೆಯದಾದ ದುರ್ಗಾ ಮತ್ತು ಶಿವ ದೇವಸ್ಥಾನದಲ್ಲಿ ಉತ್ತರಕ್ಕೆ ಮುಖವಾಗಿ ದುರ್ಗಾದೇವಿ ವಿಗ್ರಹ ಮತ್ತು ಪೂರ್ವಕ್ಕೆ ಮುಖವಾಗಿ ಶಿವ ದೇವಸ್ಥನವು ಒಂದೇ ಕಡೆ ಇದೆ. 

ಎರಡು ವರ್ಷಗಳ ಹಿಂದೆಯೇ ಈ ದೇವಸ್ಥಾನದ ಒಂದು ಗೋಡೆ ಕುಸಿದು ಬಿದ್ದಾಗ ಸ್ಥಳೀಯರು ಹಾಗೂ ಪ್ರವಾಸಿಗರು ಕೇಂದ್ರ ಪೂರಾತತ್ವ ಸರ್ವೇಕ್ಷಣಾ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಜೀರ್ಣೋದ್ವಾರಕ್ಕೆ ಮನವಿ ಮಾಡಿಕೊಂಡಿದ್ದರು. 

ಬಿಡುವಿಲ್ಲದೆ ಸುರಿಯುತ್ತಿರುವ ಮಳೆಯಿಂದಾಗಿ ಹಂಪಿಯ ಅನೇಕ ದೇವಾಲಯಗಳು ಶಿಥಿಲಾವಸ್ಥೆಗೊಂಡಿದ್ದು, ಹಂತ-ಹಂತವಾಗಿ ಎಲ್ಲಾ ಸ್ಮಾರಕಗಳು ಹಾಗೂ ದೇಗುಲಗಳ ಜೀರ್ಣೋದ್ಧಾರ ಕಾರ್ಯ ನಡೆಯಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ದೇಗುಲದ ಗೋಡೆಗಳು ಕುಸಿದಿರುವ ಬಗ್ಗೆ ಮಾಹಿತಿ ಬಂದಿದ್ದು, ಶೀಘ್ರದಲ್ಲೇ ಜೀರ್ಣೋದ್ಧಾರ ಕಾರ್ಯಗಳು ನಡೆಸಲಾಗುತ್ತದೆ. ಹಂಪಿಯಲ್ಲಿ ಇದೇ ರೀತಿಯ ಸಾಕಷ್ಟು ದೇವಾಲಯಗಳಿದ್ದು, ಎಲ್ಲವನ್ನು ರಕ್ಷಣೆ ಮಾಡುವ, ಜೀರ್ಣೋದ್ಧಾರ ಮಾಡುವ ಅಗತ್ಯವಿದೆ ಎಂದು ಪುರಾತತ್ವ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ. 

SCROLL FOR NEXT