ರಾಜ್ಯ

ಮಂಗಳೂರು: ಪೋಸ್ಟ್‌ಮ್ಯಾನ್‌ ಮೇಲೆ ಯುವಕನಿಂದ ಹಲ್ಲೆ, ದೂರು ದಾಖಲು

Raghavendra Adiga

ಮಂಗಳೂರು: ಯುವಕನೊಬ್ಬ ಪೋಸ್ಟ್‌ಮ್ಯಾನ್‌ನನ್ನು ಕಬ್ಬಿಣದ ರಾಡಿನಿಂದ ಹೊಡೆದು ಹಲ್ಲೆ ಮಾಡಿರುವುದಲ್ಲದೆ ಪೋಸ್ಟ್‌ಮ್ಯಾನ್‌ನ ಬೈಕ್ ಅನ್ನು ಹಾನಿಗೊಳಿಸಿ ಅವರಲ್ಲಿದ್ದ ಲೆಟರ್ ಗಳನ್ನು ಸಹ ದಿಕ್ಕು ಪಾಲಾಗಿ ಎಸೆದಿರುವ ಘಟನೆ ಮಂಗಳೂರು ನಗರದ ಮಠದಕಾನುವಿನಲ್ಲಿ ನಡೆದಿದೆ.

ಸೋಮವಾರ ನಡೆದಿರುವ ಈ ಘಟನೆ ತಡವಾಗಿ ಬೆಳಕು ಕಂಡಿದ್ದು ನಗರದ ಅಶೋಕ್‌ನಗರ ಅಂಚೆ ಕಚೇರಿಯ ಪೋಸ್ಟ್‌ಮ್ಯಾನ್ ಕೋಟೇಕಾರು ನಿವಾಸಿ  ದಿನೇಶ್ (49), ಹಲ್ಲೆಗೊಳಗಾದ ವ್ಯಕ್ತಿ. ಇವರು ಮನೀಶ್ ಎಂಬ ಯುವಕನಿಂದ ಹಲ್ಲೆಗೊಳಗಾಗಿದ್ದರು.

ಅಶೋಕ್‌ನಗರ ಅಂಚೆ ಕಚೇರಿಯಲ್ಲಿ 19 ವರ್ಷದಿಂದ ಪೋಸ್ಟ್‌ಮ್ಯಾನ್ ಆಗಿ ಕೆಲಸ ಮಾಡುತ್ತಿರುವ ದಿನೇಶ್ ಎಂದಿನಂತೆ ತಮ್ಮ  ವ್ಯಾಪ್ತಿಯಲ್ಲಿನ ಪ್ರದೇಶಕ್ಕೆ ಬಂದ ಪತ್ರಗಳ ರವಾನೆಗಾಗಿ ತೆರಳಿದ್ದಾರೆ. ಆ ವೇಳೆ ಮನೀಶ್ ಗೆ ಬಂದಿದ್ದ ಪತ್ರವನ್ನು ಆತನಿಗೆ ತಲುಪಿಸಲು ಹೋದಾಗ ಮನೀಶ್ ಅವಾಚ್ಯ ಶಬ್ದಗಳನ್ನು ಬಳಸಿ ದಿನೇಶ್ ಅವರನ್ನು ನಿಂದಿಸಿದ್ದಾನೆ. ಮಾತ್ರವಲ್ಲದೆ ಇದ್ದಕ್ಕಿದ್ದಂತೆ ಕಬ್ಬಿಣದ ರಾಡಿನಿಂದ ಅವರಿಗೆ ಹೊಡೆದಿದ್ದಾನೆ. ದಿನೇಶ್ ಹೊಡೆತದಿಂದ ತಪ್ಪಿಸಿಕೊಂಡು ಓಡಿದಾಗ ಮನೀಶ್ ಅವರಿಗೆ ಸೇರಿದ್ದ ಬೈಕಿಗೆ ಹಾನಿ ಮಾಡಿದ್ದಾನೆ. ಬೈಕನ್ನು ಜಖಂ ಗೊಳಿಸಿದ್ದಲ್ಲದೆ ಅವರ ಬಳಿ ಇದ್ದ ಎಲ್ಲಾ ಲೆಟರ್ ಗಳನ್ನು ರಸ್ತೆ ಮೇಲೆ ಎಸೆದಿದ್ದಾನೆ. 

ಯುವಕರ ಕೃತ್ಯವನ್ನು ನೋಡಿದ ಸ್ಥಳೀಯರು ಪೋಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಬಂದಾಗ ಮನೀಶ್ ಅವರ ಮಾತುಗಳನ್ನು ಕೇಳದೆ ರಾಡ್‌ ಹಿಡಿದು ಅವರಿಗೆ ಸಹ ಬೆದರಿಸಿದ್ದಾನೆ. 

ಮನೀಶ್ ನಿಂದಾಗಿ ತಮಗೆ 35,000 ರೂ.ಗಳ ನಷ್ಟವಾಗಿದೆ ಮತ್ತು ಎಲ್ಲಾ ಲೆಟರ್ ಗಳನ್ನು ಎಸೆದಿರುವುದು ಖಂಡನೀಯ ಕೃತ್ಯ ಎಂದು ಆರೋಪಿಸಿ ದಿನೇಶ್ ಬರ್ಕೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ಆರೋಪಿ ಮನೀಶ್ ಪರಾರಿಯಾಗಿದ್ದು ಪೋಲೀಸರು ಶೋಧಕಾರ್ಯ ನಡೆಸಿದ್ದಾರೆ.

SCROLL FOR NEXT